ಚಾಮರಾಜನಗರ: ಪ್ರವಾಹದಿಂದ ಪಾರಾಗಲು ತೆಂಗಿನಮರ ಏರಿ ಕುಳಿತಿದ್ದ ರೈತನ ರಕ್ಷಣೆ

Update: 2022-09-06 12:26 GMT

ಚಾಮರಾಜನಗರ,ಸೆ.6: ಪ್ರವಾಹದಿಂದ ರಕ್ಷಿಸಿಕೊಳ್ಳಲು ತೆಂಗಿನಮರ ಏರಿ ಕುಳಿತಿದ್ದ ಕಣ್ಣೇಗಾಲ ಗ್ರಾಮದ ರೈತರೊಬ್ಬರನ್ನು 10 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಜೀವದ ಹಂಗು ತೊರೆದು ತಹಶೀಲ್ದಾರರಾದ ಬಸವರಾಜು, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಅಗ್ನಿಶಾಮಕ ಅಧಿಕಾರಿ ಶಿವಾಜಿರಾವ್ ಪವಾರ್ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿ, ಗ್ರಾಮದ ಯುವಕರು ತಡರಾತ್ರಿ ರಕ್ಷಣೆ ಮಾಡಿದ್ದಾರೆ. 

ಕಣ್ಣೇಗಾಲ ಗ್ರಾಮದ 62 ವರ್ಷದ ರಾಮಸ್ವಾಮಿ ನಾಯಕ ಅವರು ಕಣ್ಣೇಗಾಲ ಗ್ರಾಮದಿಂದ 2.5 ಕಿ.ಮೀ ದೂರವಿರುವ ತಮ್ಮ ಜಮೀನಿಗೆ ಸೋಮವಾರ ಬೆಳಿಗ್ಗೆ ತೆರಳಿದ್ದರು. ವಾಪಸ್ ಬರುವ ವೇಳೆಗೆ ನೀರಿನ ಮಟ್ಟ ಹೆಚ್ಚಾಯಿತು. ಆಶ್ರಯಕ್ಕಾಗಿ ತೆಂಗಿನಮರ ಏರಿ ಕುಳಿತಿದ್ದರು. ವಿಷಯ ಮುಟ್ಟಿಸಲು ಅವರ ಬಳಿ ಮೊಬೈಲ್ ಸಹ ಇರಲಿಲ್ಲ ಎನ್ನಲಾಗಿದೆ.  

ಇದನ್ನೂ ಓದಿ: ಕೊಪ್ಪಳ: ಇಬ್ಬರು ಪೊಲೀಸರು ನೀರುಪಾಲು

ತಡರಾತ್ರಿ ಅಗ್ನಿಶಾಮಕ ದಳದವರು ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿ ರಂಗಸ್ವಾಮಿ ಅವರನ್ನು ರಕ್ಷಿಸಿದ್ದಾರೆ.

ರಾತ್ರಿಯಿಡಿ ನಡೆದ ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಯವರು ಕಾರ್ಯಾಚರಣೆ ತಂಡದೊಂದಿಗೆ ಸತತ ಸಂಪರ್ಕದಲ್ಲಿದ್ದು ಅಗತ್ಯ ಮಾರ್ಗದರ್ಶನ ಮಾಡಿದರು. ಕಾರ್ಯಾಚರಣೆಗೆ ಗ್ರಾಮಸ್ಥರು, ಯುವಕರು, ಗ್ರಾಮ ಪಂಚಾಯಿತಿ ಸದಸ್ಯರು ಸಹ ನೆರವಾಗಿದ್ದಾರೆ. 

ಇಂದು ಬೆಳಿಗ್ಗೆ ರಾಮಸ್ವಾಮಿ ನಾಯಕ ಅವರ ಮನೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ರಾಮಸ್ವಾಮಿ ನಾಯಕ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News