ಕಪ್ಪನ್ ಜಾಮೀನು ಅರ್ಜಿ ವಿರೋಧಿಸಿ ಉ.ಪ್ರ. ಪೊಲೀಸರಿಂದ ಸುಪ್ರೀಮ್‌ನಲ್ಲಿ ಅಫಿಡವಿಟ್

Update: 2022-09-06 12:29 GMT
ಸಿದ್ದಿಕ್ ಕಪ್ಪನ್ 

ಹೊಸದಿಲ್ಲಿ: ಬಂಧನದಲ್ಲಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್(Siddique Kappan) ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ(Supreme Court) ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿರೋಧಿಸಿರುವ ಉತ್ತರ ಪ್ರದೇಶ ಪೊಲೀಸರು,ಅವರು ದೇಶದಲ್ಲಿ ಧಾರ್ಮಿಕ ವೈಷಮ್ಯವನ್ನು ಹುಟ್ಟುಹಾಕಲು ಮತ್ತು ಭಯೋತ್ಪಾದನೆಯನ್ನು ಹರಡಲು ನಡೆದಿದ್ದ ದೊಡ್ಡ ಸಂಚೊಂದರ ಭಾಗವಾಗಿದ್ದರು ಎಂದು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶ (Uttar Pradesh) ಪೊಲೀಸರು ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸೋಮವಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಕಪ್ಪನ್ ಪಿಎಫ್‌ಐ ಜೊತೆಗೆ ನಿಕಟ ನಂಟು ಹೊಂದಿದ್ದಾರೆ ಎಂದೂ ಆರೋಪಿಸಿದ್ದಾರೆ.

ಕಪ್ಪನ್ ವಾಸ್ತವದಲ್ಲಿ ಹಥರಾಸ್ ಸಂತ್ರಸ್ತೆಯನ್ನು ಭೇಟಿಯಾಗಲು ಹಾಗೂ ವೈಷಮ್ಯವನ್ನು ಹುಟ್ಟುಹಾಕಲು ಮತ್ತು ಭಯೋತ್ಪಾದನೆಯನ್ನು ಹರಡಲು ತೆರಳಿದ್ದ ಪಿಎಫ್‌ಐ/ಸಿಎಫ್‌ಐ ನಿಯೋಗದ ಭಾಗವಾಗಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಹ ಆರೋಪಿ ಸಿಎಫ್‌ಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ನಿರ್ದೇಶನದ ಮೇರೆಗೆ ಈ ನಿಯೋಗವನ್ನು ಹಥರಾಸ್‌ಗೆ ರವಾನಿಸಲಾಗಿತ್ತು. ನಿಯೋಗದ ಪ್ರವಾಸಕ್ಕೆ ಆರ್ಥಿಕ ನೆರವನ್ನು ಶರೀಫ್ ಒದಗಿಸಿದ್ದರು ಎನ್ನುವುದೂ ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಪೊಲೀಸರು ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ಕಳೆದ ತಿಂಗಳು ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಕಪ್ಪನ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಸರ್ವೋಚ್ಚ ನ್ಯಾಯಾಲಯವು ವಿಷಯವನ್ನು ವಿಲೇವಾರಿಗಾಗಿ ಸೆ.9ಕ್ಕೆ ಮುಂದೂಡಿದೆ.

2020,ಅಕ್ಟೋಬರ್‌ನಲ್ಲಿ ಕಪ್ಪನ್ ಹಥರಾಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಕುರಿತು ವರದಿ ಮಾಡಲು ತೆರಳುತ್ತಿದ್ದಾಗ ಉತ್ತರ ಪ್ರದೇಶದ ಮಥುರಾದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು. ಅವರ ಮೇಲೆ ದೇಶದ್ರೋಹದ ಮತ್ತು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದ್ದು, ಆಗಿನಿಂದಲೂ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಪ್ರವಾಹದಿಂದ ಪಾರಾಗಲು ತೆಂಗಿನಮರ ಏರಿ ಕುಳಿತಿದ್ದ ರೈತನ ರಕ್ಷಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News