ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ, ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

Update: 2022-09-06 17:12 GMT

ಬೆಂಗಳೂರು, ಸೆ.6: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಳನಾಡಿನ ಹಲವು ಭಾಗಗಳಲ್ಲಿ ಸೋಮವಾರ, ಮಂಗಳವಾರವೂ ಮುಂಗಾರು ಮಳೆ ಮುಂದುವರೆದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ, ಭಾರೀ ಅವಾಂತರ ಸೃಷ್ಟಿಯಾಗಿದೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವುದಲ್ಲದೆ ರಸ್ತೆಗಳ ತುಂಬ ನೀರು ತುಂಬಿ ಕಾಲುವೆಗಳಂತೆ ಹರಿದಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ಪರದಾಡುವಂತಾಗಿದೆ. 

ಬೆಂಗಳೂರಿನಲ್ಲಿ ಇಂದು ದಕ್ಷಿಣ ವಲಯದಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವು ಬಡಾವಣೆಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಇದರಿಂದ, ಬಹಳಷ್ಟು ವಸತಿ ಸಮುಚ್ಚಯಗಳ ಬೇಸ್‍ಮೆಂಟ್‍ಗೆ ನೀರು ನುಗ್ಗಿದ್ದರಿಂದ ವಾಹನಗಳು ಮುಳುಗಡೆಯಾಗಿದ್ದವು. ತುಂಬಿದ್ದ ನೀರನ್ನು ಪಂಪ್ ಮೂಲಕ ಹೊರ ಹಾಕಲಾಗುತ್ತಿರುವ ದೃಶ್ಯಗಳು ಹಲವು ಕಡೆಗಳಲ್ಲಿ ಕಂಡು ಬಂದಿತು.

ಸಿಲಿಕಾನ್ ಸಿಟಿಯಲ್ಲಿ ಮಾರತಹಳ್ಳಿ, ಸರ್ಜಾಪುರ, ವೈಟ್ ಫೀಲ್ಡ್, ಕೆ.ಆರ್.ಪುರಂ ರಸ್ತೆಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿತ್ತಲ್ಲದೆ ವಾಹನ ಸವಾರರು ಪರದಾಡುವಂತಾಗಿತ್ತು. 

ಗದಗ, ಬಾಗಲಕೋಟೆ, ಬೆಳಗಾವಿ, ಧಾರವಾಡ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ತುಮಕೂರು ಜಿಲ್ಲೆಯ ಹಲವು ಕಡೆ ಸೋಮವಾರ, ಮಂಗಳವಾರ ಭಾರೀ ಮಳೆ ಸುರಿದಿದ್ದು, 22 ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಗುಬ್ಬಿ ತಾಲೂಕಿನ ಚೇಳೂರು ಭಾಗದಲ್ಲಿ 11, ಕಡಬ 7, ಹಾಗಲವಾಡಿ 1, ಸಿ.ಎಸ್.ಪುರದಲ್ಲಿ 2 ಮನೆಗಳು ಕುಸಿದುಬಿದ್ದಿವೆ. ನಿಟ್ಟೂರು ಹೋಬಳಿಯ ಮದನಗಟ್ಟ ಗ್ರಾಮದ ತೋಟದ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಅಲ್ಲಿನ ನಿವಾಸಿಗಳು ಜಲಬಂಧನಕ್ಕೆ ಒಳಗಾಗಿದ್ದಾರೆ.

ಮೂಕನಹಳ್ಳಿ ಪಟ್ಟಣದಲ್ಲಿ ನೂರಾರು ಎಕರೆ ಅಡಿಕೆ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕೊರಟಗೆರೆ, ಮಧುಗಿರಿಯಲ್ಲಿ ಮಳೆಯ ರೌದ್ರವಾತಾರ ಮುಂದುವರೆದಿದ್ದು, ಜಯಮಂಗಲಿ, ಗರುಡಾಚಲ, ಸುವರ್ಣಮುಖಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ 170ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಶಿರಾದಲ್ಲಿ ಭಾರೀ ಮಳೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿ ಕಳ್ಳಂಬೆಳ್ಳ ಮತ್ತು ಹುಲಿಕುಂಟೆ ಹೋಬಳಿಯ ಅನೇಕ ಗ್ರಾಮಗಳು ಸಂಪರ್ಕ ಕಡಿತಗೊಂಡಿರುವುದಲ್ಲದೆ ಜಲಾವೃತವಾಗಿವೆ.

ಗದಗ ಜಿಲ್ಲೆಯ ನವಲಗುಂದ, ರೋಣ ನಡುವಿನ ಸೇತುವೆ ಕುಸಿತವಾಗಿದ್ದು, ಸಂಪರ್ಕವೇ ಕಡಿತಗೊಂಡಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದ ಸೇತುವೆ ಮುಳುಗಡೆಯಾಗಿದ್ದು, ಅಲ್ಲೂ ಕೂಡ ಸಂಪರ್ಕ ಕಡಿತವಾಗಿದೆ. ವಡಗೇರ ತಾಲೂಕಿನ ಮಾಚನೂರು ಗ್ರಾಮದ ಸರಕಾರಿ ಶಾಲೆ ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಶಾಲೆಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಯಿತು.

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಉಂಟಾಗಿದೆ. ಕಿತ್ತೂರು ತಾಲೂಕಿನ ಗಂಗಾಂಬಿಕೆ ಐಕ್ಯಮಂಟಪಕ್ಕೂ ನೀರು ನುಗ್ಗಿ ಅನಾಹುತ ಉಂಟಾದ ವರದಿಯಾಗಿದೆ.

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ

ರಾಜ್ಯದಲ್ಲಿ ಇನ್ನೂ 4 ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕನ್ಯಾಕುಮಾರಿಯಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ನೈರುತ್ಯ ಮುಂಗಾರು ಚುರುಕಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಬಳ್ಳಾರಿಯಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

► ಕೆ.ಆರ್. ಪುರಂ ವ್ಯಾಪ್ತಿಯ ಶಾಲೆಗಳಿಗೆ ರಜೆ: ಬೆಂಗಳೂರು ನಗರದ ಕೆ.ಆರ್.ಪುರಂ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ  ಬುಧವಾರ (ಸೆ.7) ರಜೆ ಘೋಷಣೆ ಮಾಡಲಾಗಿದೆ. ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ, ಹಾಗಾಗಿ ರಜೆ ಘೋಷಣೆ ಮಾಡಲಾಗಿದೆ. ಇದೇ ತಿಂಗಳ ಮುಂದಿನ ಎರಡು ಶನಿವಾರಗಳಂದು ಪೂರ್ಣ ದಿನ ಕಾರ್ಯನಿರ್ವಹಿಸುವ ಮೂಲಕ ರಜಾ ದಿನವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. 

ಐಟಿ ಕಾರಿಡಾರ್ ಜಲಾವೃತ

ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜಗತ್ಪ್ರಸಿದ್ದ ಐಟಿ ಕಾರಿಡಾರ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಮಹದೇವಪುರ ಹಾಗೂ ಬೊಮ್ಮನಹಳ್ಳಿ ಪ್ರದೇಶಗಳು ಜಲಾವೃತಗೊಂಡಿವೆ. ವಿಪ್ರೋ ಕಚೇರಿ ಸೇರಿ ಪ್ರಸಿದ್ಧ ಐಟಿ ಕಂಪೆನಿಗಳ ಸುತ್ತ ನೀರು ನಿಂತಿದೆ. 

ಏಷ್ಯನ್ ಬಾಸ್ಕೆಟ್‍ಬಾಲ್‍ಗೆ ಅಡ್ಡಿಪಡಿಸಿದ ಮಳೆ

ಬೆಂಗಳೂರು ಮಳೆ ಏಷ್ಯನ್ ಅಂಡರ್-18 ಮಹಿಳಾ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್‍ಗೂ ಅಡ್ಡಿಪಡಿಸಿದೆ. ಕ್ರೀಡಾಂಗಣಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಸೋಮವಾರ ನಡೆಯಬೇಕಿದ್ದ ‘ಎ’ ಗುಂಪಿನ ಪಂದ್ಯಗಳನ್ನು ಮುಂದೂಡಿಕೆ ಮಾಡಲಾಗಿದೆ.

► ಬುಧವಾರದಿಂದ ಕಾವೇರಿ ನೀರು ಪೂರೈಕೆ

ಬೆಂಗಳೂರಿಗೆ ಸೆ.7ರಿಂದ ಎಂದಿನಂತೆ ಕಾವೇರಿ ನೀರು ಪೂರೈಕೆಯಾಗಲಿದ್ದು, ಬೆಳಗ್ಗೆ ಅಥವಾ ಮಧ್ಯಾಹ್ನದೊಳಗೆ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News