ಆರೋಪಗಳಿಗೆ ದಾಖಲೆ ಕೊಡಿ, ತನಿಖೆಗೆ ನಾವು ಸಿದ್ಧ: ಒಡನಾಡಿ ಸಂಸ್ಥೆ
ಮೈಸೂರು, ಸೆ. 7: ಒಡನಾಡಿ ಸಂಸ್ಥೆ ವಿರುದ್ಧ ಜಿತೇಂದ್ರ ಎಸ್ ಹುಲಿಗುಂಟೆ ಅವರ ಆರೋಪಗಳಿಗೆ ಸಂಬಂಧಿಸಿ ಪೂರಕ ದಾಖಲೆಗಳನ್ನು ಒದಗಿಸುವಂತೆ ಒಡನಾಡಿ ಸಂಸ್ಥೆ ಒತ್ತಾಯಿಸಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥೆಯ ಸಂಸ್ಥಾಪಕರಾಗಿರುವ ಸ್ಟ್ಯಾನ್ಲಿ , 'ಒಡನಾಡಿ ಸೇವಾ ಸಂಸ್ಥೆಯು ನೊಂದ ಮಕ್ಕಳ ವಿಷಯದಲ್ಲಿ, ಮತ್ತು ಮಕ್ಕಳ ಹಕ್ಕುಗಳ ವಿಷಯದಲ್ಲಿ ಹೋರಾಟ ನಡೆಸುವಾಗಲೆಲ್ಲ ಈ ರೀತಿಯ ಚಿತಾವಣಿಯ ಮಾತುಗಳು ಕೇಳಿಬರುತ್ತದೆ. ನೊಂದ ಮಕ್ಕಳ ಕುರಿತು ಮಾತನಾಡದ ಈ ಮುಖಂಡರು ಮತಾಂತರ, ಕ್ರೈಸ್ತರ ಷಡ್ಯಂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಯಾವುದೇ ಧರ್ಮದ, ಜಾತಿಯ ವಿರೋಧಿಗಳಲ್ಲ ಹಾಗೂ ನೊಂದ ಮಕ್ಕಳ ಪರ ಎಂಬುವುದನ್ನು ಮಾತ್ರ ದೃಢೀಕರಿಸುತ್ತೇವೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದ ಮುರುಘಾ ಶ್ರೀ ಬಂಧನ ಹಿನ್ನೆಲೆ: 'ಒಡನಾಡಿ' ಸಂಸ್ಥೆ ಮುಖ್ಯಸ್ಥರಿಗೆ ಬೆದರಿಕೆ ಕರೆ
'ನಿಮ್ಮ ಎಲ್ಲಾ ತನಿಖೆಗಳಿಗೆ ನಾವು ಸಿದ್ಧರಿದ್ದೇವೆ, ಕೇಂದ್ರ ತನಿಖಾ ತಂಡದಿಂದಲೂ (ಸಿ.ಐ.ಎ) ನಮ್ಮನ್ನು ತನಿಖೆಗೊಳಪಡಿಸಬಹುದು, ನಾವು ಮೊದಲಿಂದಲೂ ಇದನ್ನೇ ಹೇಳುತ್ತಿದ್ದೇವೆ. ಸ್ವಾಮೀಜಿರವರ ಮೇಲಿರುವ ಆರೋಪಕ್ಕೂ ಸಿ.ಐ.ಎ ತನಿಖೆ ಕೈಗೊಳ್ಳುವಂತೆ ಹೇಳಿದಾಗ ಈ ವಿಚಾರಕ್ಕೂ ಕೂಡ ತಮಗೆ ಬೆಲೆ ಬರುತ್ತದೆ. ಗೌರವಾನ್ವಿತ ಆರೋಪಿದಾರರು ಮೊದಲಿಗೆ ಮಠದೊಳಗಿನ ವೈಶಮ್ಯದಿಂದ ಈ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ. ಹಾಗೇಯೆ 'ಬಸವರಾಜನ್' ಎಂಬುವವರು ಷಡ್ಯಂತ್ರ ಮಾಡಿಸಿದ್ದೀರಿ. ಎನ್ನುತ್ತೀರಿ, ಕ್ರೈಸ್ತ ಮಿಷನರಿಗಳು ಈ ರೀತಿ ಮಾಡುತ್ತಿವೆ ಎನ್ನುತ್ತೀರಿ ಈ ಎಲ್ಲದಕ್ಕೂ ಒಂದೇ ಉತ್ತರ ಕೇಂದ್ರ ತನಿಖಾ ತಂಡದಿಂದ ತನಿಖೆ ಮಾಡಿಸುವುದು ಮುಖ್ಯವಾಗಿರುತ್ತದೆ. ತನಿಖೆಗೆ ನಾವಂತೂ ಸಿದ್ಧರಿದ್ದೇವೆ' ಎಂದು ಹೇಳಿದ್ದಾರೆ.
'ಹಾಗೇಯೆ ನೊಂದ ಮಕ್ಕಳ ಪರವಾಗಿ, ಮಠದಲ್ಲಿ ಸ್ವಾಮಿಜಿರವರ ಬಗ್ಗೆ ಸಿ.ಐ.ಎ ತನಿಖೆ ನಡೆಯಲಿ, ನಾವು ನಿರಂತರವಾಗಿ ನಿಲ್ಲುತ್ತೇವೆ ಎಂದು ತಾವು ದಯಮಾಡಿ ನಿಟ್ಟಿನಲ್ಲಿ ಒಂದು ಮಾತನಾಡಿ, ಬಿಟ್ಟು. ಇಲ್ಲದೆ ವಿಷಯವನ್ನಿಟ್ಟುಕೊಂಡು ವಿಷಯಂಕಾರಿಗಳಾಗಬೇಡಿ. ನಿಮ್ಮ ಬಗ್ಗೆ ಒಂದು ಸಣ್ಣ ಘನತೆಯಾದರು ಹೆಚ್ಚುತ್ತದೆ. ಹಾಗೆಯೇ ನಿಮ್ಮ ಆರೋಪಕ್ಕೆ ಪೂರಕ ದಾಖಲೆ ಒದಗಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿರುವುದಕ್ಕೆ ಒಂದಾದರೂ ದೂರು ಇದ್ದರೆ ಜನರಿಗೆ ತೋರಿಸಿ' ಎಂದು ಒತ್ತಾಯಿಸಿದ್ದಾರೆ.
ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಒಡನಾಡಿ ಸಂಸ್ಥೆ ವಿರುದ್ಧ ಸಂಪೂರ್ಣ ತನಿಖೆ ಆಗಬೇಕು ಎಂದು ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಹುಲಿಕುಂಟೆ ಅವರು ಹೇಳಿದ್ದರು.