×
Ad

‘ಸಚಿವರು ಕಾಣೆಯಾಗಿದ್ದಾರೆ’: ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಕಾಂಗ್ರೆಸ್ ನಿಂದ ಅಭಿಯಾನ

Update: 2022-09-07 21:48 IST
Photo- twitter@INCKarnataka 

ಬೆಂಗಳೂರು, ಸೆ.7: ರಾಜಧಾನಿ ಬೆಂಗಳೂರು ಮಳೆಯ ತೀವ್ರತೆಗೆ ಕಂಗೆಟ್ಟಿದ್ದು, ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾದ ಬೆಂಗಳೂರು ಪ್ರತಿನಿಧಿಸುವ ‘ಸಚಿವರು ಕಾಣೆಯಾಗಿದ್ದಾರೆ’ ಎಂದು ಕಾಂಗ್ರೆಸ್ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿದೆ.

ಸಚಿವ ಡಾ.ಕೆ.ಸುಧಾಕರ್ ಅವರು ಕೋವಿಡ್ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್‍ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ರು. ಈಗ ಬೆಂಗಳೂರು ಸ್ವಿಮ್ಮಿಂಗ್ ಪೂಲ್ ಆಗಿದೆ, ಜನತೆ ಸ್ವಿಮ್ಮಿಂಗ್ ಮಾಡುವ ಸ್ಥಿತಿ ಇದೆ, ಸಚಿವರು ನಾಪತ್ತೆಯಾಗಿದ್ದಾರೆ. ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ:  ಉಮೇಶ್ ಕತ್ತಿ ಪತ್ನಿಗೆ ಪ್ರಧಾನಿ ಸಂತಾಪ ಪತ್ರ 

ಕಳೆದ ಒಂದು ವಾರದಿಂದ ಮಳೆಯಲ್ಲಿ ಜನತೆ ಮುಳುಗಲು ಶುರುವಾದಾಗಿನಿಂದ ರಾಜ್ಯದ ಗೃಹ ಸಚಿವರು ನೆರೆ ಪೀಡಿತ ಪ್ರದೇಶದಲ್ಲಾಗಲಿ, ಬೆಂಗಳೂರಿನಲ್ಲಾಗಲಿ, ವಿಧಾನಸೌಧದಲ್ಲಾಗಲಿ ಕಾಣಿಸಲಿಲ್ಲ. ಸ್ವಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಆರಗ ಜ್ಞಾನೇಂದ್ರ ಅವರು ಗೃಹಸಚಿವರಾಗಿ ಕೆಲಸ ಮಾಡಲು ಆರಂಭಿಸುವುದು ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನು ಅನುಭವಿಸುತ್ತಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ. ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಾಬ್, ಹಲಾಲ್‍ಗಳಿಗೆ ಕ್ರಿಯಾಶೀಲರಾಗ್ತಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರನ್ನು ಪ್ರತಿನಿಧಿಸುವ ಮತ್ತೊಬ್ಬ ಸಚಿವ ಎಸ್.ಟಿ.ಸೋಮಶೇಖರ್ ಮಳೆ ಅವಾಂತರದಿಂದ ನಲುಗಿದ ಯಾವುದೇ ಏರಿಯಾಗಳಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ. ಜನತೆ ಹುಡುಕುತ್ತಿದ್ದಾರೆ. ಜನರ ಮನೆಯಲ್ಲಿ ಮಳೆ ನೀರು ನುಗ್ಗಿದರೆ, ಇವರ ಮನದಲ್ಲಿ ಸನ್ಮಾನದ ಆಸೆ ನುಗ್ಗಿದೆ. ಸಚಿವರೇ ಜನರತ್ತ ನೋಡುವುದು ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬೆಂಗಳೂರಲ್ಲೇ ಬೆಳೆದು, ಬೆಂಗಳೂರಲ್ಲೇ ಅಧಿಕಾರ, ಆಸ್ತಿ, ಅಂತಸ್ತು ಕಂಡುಕೊಂಡ ಸಚಿವ ವಿ.ಸೋಮಣ್ಣ ಅವರು ಬೆಂಗಳೂರನ್ನೇ ಕಡೆಗಣಿಸಿದರೆ ಹೇಗೆ? ಬೆಂಗಳೂರು ಉಸ್ತುವಾರಿಗಾಗಿ ಹಂಬಲಿಸುವ ಇವರ ಮನ ಜನರ ಕಷ್ಟಕ್ಕೆ ಮಿಡಿಯದಿರುವುದೇಕೆ? ಜನರಿಗೆ ಕಷ್ಟ ಬಂದಾಗ ಬಿಜೆಪಿಗರಿಗೆ ವಿಶ್ರಾಂತಿಯ ಸಮಯವೇ? ಎಂದು ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರಿನ ಜನರ ಋಣ ಹೊತ್ತಿರುವ ಸಚಿವರಾದ ಕೆ.ಗೋಪಾಲಯ್ಯ ಇದುವರೆಗೂ ಯಾವುದೇ ನೆರೆ ಸಂತ್ರಸ್ತ ಜನರ ಬಳಿ ಹೋಗಿದ್ದು ಎಲ್ಲೂ ಕಾಣಲಿಲ್ಲ. ಪರಿಹಾರ ಕಾರ್ಯಗಳನ್ನು ನಡೆಸಬೇಕಾದವರು ನಾಪತ್ತೆಯಾಗಿದ್ದೆಲ್ಲಿ? ಸಿಎಂ ಸಚಿವರೆಲ್ಲರನ್ನೂ ‘ಮಳೆಯಲಿ, ಚಳಿಯಲ್ಲಿ, ಬೆಚ್ಚಗೆ ಮಲಗಲಿ' ಎಂಬಂತೆ ಬಿಟ್ಟಿದ್ದಾರೆಯೇ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಒಂದೇ ಒಂದು ಬಾರಿ ಸಿಎಂ ಜೊತೆಯಲ್ಲಿ ನೆಪಮಾತ್ರದ ಸಿಟಿ ರೌಂಡ್ಸ್ ಹೊಡೆದಿದ್ದು ಬಿಟ್ಟರೆ ಬೆಂಗಳೂರಿನ ಸಚಿವರಾದ ಬಿ.ಎ.ಬಸವರಾಜರವರು ಮತ್ತೆ ಎಲ್ಲಿಯೂ ಕಾಣಿಸಿಕೊಳಲಿಲ್ಲ. ನೀರು ನುಗ್ಗಿದ ಮನೆಗಳಿಗೆ ಪರಿಹಾರವೇನು? ನೀರು ನಿಂತ ರಸ್ತೆಗಳಿಗೆ ಮುಕ್ತಿ ಏನು? ಸಚಿವರು ಜನರ ಕಷ್ಟ ಆಲಿಸಲು ಹೋಗದಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬೆಂಗಳೂರಿನ ಜನತೆಯ ಮತಭಿಕ್ಷೆ ಪಡೆದು ಜನತೆಗೇ ದ್ರೋಹವೆಸಗುವುದು ಸರಿಯೇ ಸಚಿವರೇ? ಬೆಂಗಳೂರಿನ ಜನತೆ ಮಳೆಯಿಂದ ಕಂಗೆಟ್ಟಿರುವಾಗ ‘ನಾನೇ ಸಿಎಂ' ಎನ್ನುವ ಸಚಿವರು ನಾಪತ್ತೆಯಾಗಿದ್ದಾರೆ. ‘ಗಂಡಸ್ತನವನ್ನು ಕೆಲಸದಲ್ಲಿ ತೋರಿಸಿ’ ಎಂದವರೇ ಕೆಲಸ ಮಾಡದಿದ್ದರೆ ಏನೆಂದು ಕರೆಯಬೇಕು ಅಶ್ವತ್ಥ ನಾರಾಯಣ ಅವರೇ? ಎಂದು ಕಾಂಗ್ರೆಸ್ ಕಿಡಿಗಾರಿದೆ.

ಬೆಂಗಳೂರಿನ ಮತ್ತೊಬ್ಬ ಸಚಿವರಾದ ಮುನಿರತ್ನ ಅವರು ಮಳೆ ಬಂದಾಗಿನಿಂದ ಮನೆಯಿಂದ ಹೊರಬಂದಂತಿಲ್ಲ. ಮುನಿರತ್ನರವರೇ, ಕಮಿಷನ್ ಇಲ್ಲದೆ ತಾವು ಹೊರಬರುವುದಿಲ್ಲವೇ? ಜನರನ್ನು ಕಡೆಗಣಿಸಿರುವ ಇವರಿಗೆ ‘ಮನಿ ಇದ್ದಲ್ಲಿ ಮಾತ್ರ ಮುನಿ’ ಮಾತು ಸೂಕ್ತವಾಗುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News