ಮಲಪ್ರಭಾ ಪ್ರವಾಹಕ್ಕೆ ಬಾಗಲಕೋಟೆ ಅಸ್ತವ್ಯಸ್ತ; ಮಳೆ ಅನಾಹುತಕ್ಕೆ ಐವರು ಬಲಿ
ಬೆಂಗಳೂರು: ವ್ಯಾಪಕ ಮಳೆ ಹಾಗೂ ನದಿ ಮತ್ತು ಉಪನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿರುವುದರಿಂದ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಕಡೆ ಜೀವಹಾನಿ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಮಲಪ್ರಭಾ ನದಿ ಪ್ರವಾಹದಿಂದಾಗಿ 20 ವರ್ಷದ ರೈತ ಯುವಕ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಗಂಜಿಹಾಳ ಗ್ರಾಮದ ದೇವಾನಂದ ಕಮ್ಮಾರ್ ಮೃತಪಟ್ಟ ಯುವಕ. ನದಿಯಿಂದ ತನ್ನ ಪಂಪ್‍ಸೆಟ್ ತರುವ ಪ್ರಯತ್ನದಲ್ಲಿದ್ದಾಗ ಯುವಕ ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಯೆಮ್ಮಿಗನೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಆಶಾ ಕಾರ್ಯಕರ್ತೆ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಉಮಾದೇವಿ ಜದೇಪ್ಪ ಬಳಾಗನೂರು (44) ಎಂದು ಗುರುತಿಸಲಾಗಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತೊಂಡಿಹಾಳದಲ್ಲಿ ತೊರೆಯೊಂದರಲ್ಲಿ ಕೊಚ್ಚಿಕೊಂಡು ಹೋದ ಇಬ್ಬರು ಪೊಲೀಸರ ಮೃತದೇಹವನ್ನು ತುರ್ತು ಸೇವಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಮಹೇಶ್ ವಕ್ಕಾರ್ಡ್ (28) ಮತ್ತು ನಿಂಗಪ್ಪ ಹಲವಾಗಲಿ ಅವರು ಗಜೇಂದ್ರಗಡದಲ್ಲಿ ಬಂದೋಬಸ್ತ್ ಕರ್ತವ್ಯದಿಂದ ವಾಪಸ್ಸಾಗುತ್ತಿದ್ದಾಗ ಕೊಚ್ಚಿಕೊಂಡು ಹೋಗಿದ್ದರು.
ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಹೊಸಕೋಟೆಯಲ್ಲಿ ತೊರೆಯ ಪ್ರವಾಹದಲ್ಲಿ ಕರೇಕಪ್ಪಪ್ಪ (50) ಎಂಬ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾರೆ. ಮಲಪ್ರಭಾ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಹೊಳೆಯೂರು-ಬಾದಾಮಿ, ಗದಗ- ಬಾಗಲಕೋಟೆ ಮತ್ತು ಶಿವಯೋಗಮಂದಿರ- ಮಂಗಳೂರು ರಸ್ತೆಗಳು ಸೇತುವೆ ಮುಳುಗಿರುವ ಕಾರಣದಿಂದ ಮುಚ್ಚಿವೆ. ಹುನಗುಂದ ತಾಲೂಕು ಕನೇಗಲ್, ಕಜಗಾಳ, ಹೂವನೂರು ಮತ್ತು ಗಂಜಿಹಾಳ್ ಗ್ರಾಮದ ಜನರನ್ನು ಜಾನುವಾರುಗಳ ಸಹಿತ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು deccanherald.com ವರದಿ ಮಾಡಿದೆ.