ಆರೋಪಿಯ ಹೆಸರು ತಿರುಚಿ ಕೊಲೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು !

Update: 2022-09-08 08:23 GMT
Photo: altnews.in

ಮೈಸೂರು: ಸೆಪ್ಟೆಂಬರ್ 2 ರಂದು ಮೈಸೂರು ನಗರದ ಸಂಜೆ ಪತ್ರಿಕೆಯೊಂದು  21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ ನಗರದ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಕೊಲೆಯಾದ ಬಗ್ಗೆ ವರದಿ ಮಾಡಿತ್ತು. ವರದಿಯ ಪ್ರಕಾರ, ಸಂತ್ರಸ್ತೆ ತನ್ನ ಗೆಳೆಯನೆಂದು ನಂಬಲಾದ ವ್ಯಕ್ತಿಯೊಂದಿಗೆ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಳು. ಗೆಳೆಯ ತನ್ನ ಗೆಳತಿಯನ್ನು ಕೊಂದು ನಂತರ ಹೋಟೆಲ್ ನಿಂದ ಒಬ್ಬಂಟಿಯಾಗಿ ಹೊರಟು ಹೋಗಿದ್ದಾನೆ. ಆರೋಪಿಯು 28 ವರ್ಷದ ಆಶಿಕ್ ಎಂಬ ವ್ಯಕ್ತಿಯಾಗಿದ್ದು, ಆತ ಹಿನಕಲ್ ಗ್ರಾಮದ ನಿವಾಸಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸುದರ್ಶನ್ ನ್ಯೂಸ್ ನ ಪತ್ರಕರ್ತ ಸಾಗರ್ ಕುಮಾರ್ ಸುದ್ದಿ ವರದಿಯಲ್ಲಿ ಲಭ್ಯವಾದ ಸಂತ್ರಸ್ತೆ ಮತ್ತು ಆರೋಪಿಗಳ ಫೋಟೋ ಕೊಲಾಜ್ ಅನ್ನು ಟ್ವೀಟ್ ಮಾಡಿದ್ದಾರೆ ಮತ್ತು “ನನ್ನ ಅಬ್ದುಲ್ ಇತರರಂತೆ ಅಲ್ಲ” ಎಂದು ಹಿಂದಿಯಲ್ಲಿ ಶೀರ್ಷಿಕೆಯನ್ನು ಬರೆದಿದ್ದಾರೆ.

ಈ ಘಟನೆಯನ್ನು ಝೀ ನ್ಯೂಸ್, ಟೈಮ್ಸ್ ಆಫ್ ಇಂಡಿಯಾ ಮಲಯಾಳಂ, ನ್ಯೂಸ್ 18 ಕನ್ನಡ, ಟಿವಿ9 ಕನ್ನಡ ಹಾಗೂ ಮಾತೃಭೂಮಿ ಕೂಡ ವರದಿ ಮಾಡಿವೆ. ನ್ಯೂಸ್ 18 ಕನ್ನಡ ಹಾಗೂ  ಟಿವಿ9 ಕನ್ನಡದ ವರದಿಗಳನ್ನು ಹೊರತುಪಡಿಸಿ, ಉಳಿದ ವರದಿಗಳು ಆರೋಪಿಯನ್ನು ಆಶಿಕ್ ಎಂದು ಹೆಸರಿಸಿದೆ. ಈ ವರದಿಗಳಲ್ಲಿ ಅವರ ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಇದಕ್ಕೆ ಕೋಮು ಬಣ್ಣ ನೀಡಿದ್ದಾರೆ.

ವಾಸ್ತವವೇನು?

Alt News ಮೈಸೂರು ಡಿಸಿಪಿ ಪ್ರದೀಪ್ ಗುಂಟಿ (ಕಾನೂನು ಮತ್ತು ಸುವ್ಯವಸ್ಥೆ) ಅವರೊಂದಿಗೆ ಮಾತನಾಡಿದ್ದು, ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ತಿಳಿಸಿದ್ದಾರೆ. Alt News ದೇವರಾಜ ಪೊಲೀಸ್ ಠಾಣೆಗೆ ತೆರಳಿದ್ದು, ಅಲ್ಲಿ ಹಿರಿಯ ಅಧಿಕಾರಿಯೊಬ್ಬರು ಆರೋಪಿಯ ಹೆಸರು ಆಶಿಶ್, ಆಶಿಕ್ ಅಲ್ಲ ಎಂದು ಖಚಿತಪಡಿಸಿದರು. ಕೊಲೆಯಾದ ಯುವತಿ ಹಾಗೂ ಆರೋಪಿ ಇಬ್ಬರೂ ಹಿಂದೂ ಸಮುದಾಯದವರು ಎಂದು ಅವರು ಖಚಿತಪಡಿಸಿದ್ದಾರೆ.

Alt News ಎಫ್ಐಆರ್ ನ ಪ್ರತಿ ಪರಿಶೀಲಿಸಿದ್ದು, ಅಲ್ಲಿ ಆರೋಪಿಯನ್ನು "ಆಶಿಶ್" ಎಂದು ಸ್ಪಷ್ಟವಾಗಿ ಹೆಸರಿಸಲಾಗಿದೆ.

Alt News ಎಫ್ಐಆರ್ ನ ವಿವರಗಳನ್ನು ಪರಿಶೀಲಿಸಿದಾಗ, ಆರೋಪಿ  ಆಗಸ್ಟ್ 29 ರಂದು ಆಶಿಶ್ ಹೆಸರಿನಲ್ಲಿ ಹೋಟೆಲ್ ಅನ್ನು ಬುಕ್ ಮಾಡಿರುವುದು ಕಂಡುಬಂದಿದೆ. ಸಂತ್ರಸ್ತೆ ಕೊನೆಯದಾಗಿ ಆಗಸ್ಟ್ 30 ರಂದು ಕುಟುಂಬದೊಂದಿಗೆ ಮಾತನಾಡಿದ್ದು, ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರ ನಡುವೆ ಮೃತದೇಹ ಪತ್ತೆಯಾಗಿದೆ. ಎಫ್ಐಆರ್ ನಲ್ಲಿ ಎಲ್ಲಿಯೂ ಕೋಮು ಆಯಾಮವಿದೆ ಎಂದು ಉಲ್ಲೇಖಿಸಲಾಗಿಲ್ಲ.

Alt News ಸಂತ್ರಸ್ತೆಯ ತಂದೆ ರವೀಶ್ ಕುಮಾರ್ ಹೆಚ್. ಟಿ (53) ಅವರೊಂದಿಗೂ ಮಾತನಾಡಿದ್ದು, ಅವರು ಆರೋಪಿ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ದೃಢಪಡಿಸಿದರು.

ಮೈಸೂರಿನಲ್ಲಿ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯ ಕೊಲೆ ಆರೋಪಿಯ ಹೆಸರು ಆಶಿಕ್ ಎಂದು ತಪ್ಪಾಗಿ ವರದಿ ಮಾಡಿರುವ ಆಧಾರದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ವರದಿಗೆ ಕೋಮುಬಣ್ಣ ನೀಡಲಾಗಿದೆ. ಪೊಲೀಸರು ಕೋಮು ಆಯಾಮವನ್ನು ನಿರಾಕರಿಸಿದ್ದು, ಆರೋಪಿಯ ಹೆಸರು ಆಶಿಶ್ ಎಂದು ಬಹಿರಂಗವಾಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಸಮುದಾಯವರು.

ಆರೋಪಿಯು ಮುಸ್ಲಿಂ ಹೆಸರನ್ನು ಹೊಂದಿದ್ದರಿಂದ ಇದು ಅಂತರ್ಧರ್ಮೀಯ ಸಂಬಂಧ ಎಂಬರ್ಥದಲ್ಲಿ ಬಲಪಂಥೀಯರು ಕೋಮು ಬಣ್ಣ ಬಳಿದು ಟ್ವೀಟ್ ಮಾಡಿದ್ದರು.

ಕೃಪೆ: altnews.in

ಇದನ್ನೂ ಓದಿ: ಗೋವಾದಲ್ಲಿ ರಸ್ತೆ ಅಪಘಾತ: ಕಾರವಾರ ಮೂಲದ ಒಂದೇ ಕುಟುಂಬದ ಮೂವರು ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News