ಆಯುಷ್ಮಾನ್‌ ಭಾರತ್‌ ಯೋಜನೆಯಡಿ ವಿರಳ ಕಾಯಿಲೆಗಳಿಗೂ ಸರಕಾರದಿಂದಲೇ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ: ಸಚಿವ ಸುಧಾಕರ್‌

Update: 2022-09-08 11:38 GMT

ಬೆಂಗಳೂರು, ಸೆ. 8: ‘ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ವಿರಳ ಕಾಯಿಲೆಗಳಿಗೂ ಸರಕಾರವೇ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ. ಹೆಚ್ಚು ಚಿಕಿತ್ಸಾ ವೆಚ್ಚ ತಗುಲುವ ಕಾಯಿಲೆಗಳಿಗೂ ಉಚಿತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ಈ ಮೂಲಕ ಬಡಜನರ ಆರೋಗ್ಯ ರಕ್ಷಣೆಗೆ ಸರಕಾರ ಹೊಸ ಕೊಡುಗೆ ನೀಡಿದೆ' ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ‘ಮೇಲ್ಕಂಡ ಯೋಜನೆಯಡಿ ವಿವಿಧ ಕಾಯಿಲೆಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನಿಂದ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಆದರೆ, ವಿರಳ ಕಾಯಿಲೆಗಳನ್ನು ಈ ಯೋಜನೆಯಡಿ ಸೇರಿಸಲಾಗಿಲ್ಲ. ಅಲ್ಲದೆ, ಇಂತಹ ರೋಗಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಆ ವೆಚ್ಚ ಭರಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ, ಚಿಕಿತ್ಸೆಗಳು ಹಾಗೂ ವೆಚ್ಚದ ಪಟ್ಟಿಯನ್ನು ಸಿದ್ಧಪಡಿಸಿದ್ದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಇದರ ಜೊತೆಗೆ, ಹೆಚ್ಚು ವೆಚ್ಚ ತಗಲುವ ಕಾಯಿಲೆಗಳ ಚಿಕಿತ್ಸಾ ವಿಧಾನ ಗುರುತಿಸಿ, ಅವುಗಳಿಗೂ ವೆಚ್ಚ ನಿಗದಿ ಮಾಡಲು ಕ್ರಮ ವಹಿಸಲಾಗಿದೆ' ಎಂದು ಹೇಳಿದರು.

‘ಇದಕ್ಕಾಗಿ ಗಿರಿಜನ ಉಪಯೋಜನೆಯಡಿ 7.39ಕೋಟಿ ರೂ., ಪರಿಶಿಷ್ಟ ಜಾತಿ ಉಪಯೋಜನೆಯಡಿ 15.79ಕೋಟಿ ರೂ.ಸೇರಿ, ಒಟ್ಟು 23.18 ಕೋಟಿ ರೂ.ಮೊತ್ತವನ್ನು ಪುನರ್ ವಿನಿಯೋಗದ ಮೂಲಕ ಬಿಡುಗಡೆ ಮಾಡಿ ಆದೇಶಿಸಲಾಗಿದೆ. ಪಿಇಟಿ ಸ್ಕ್ಯಾನ್‍ಗೆ 10 ಸಾವಿರ ರೂ., ಅಸ್ಥಿಮಜ್ಜೆ ಕಸಿಗೆ ಎರಡು ವಿಧಾನಗಳಲ್ಲಿ 7ಲಕ್ಷ ರೂ.ಹಾಗೂ 21ಲಕ್ಷ ರೂ., ರೋಬೋಟಿಕ್ ಸರ್ಜರಿಗೆ 1.50 ಲಕ್ಷ ರೂ. ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವೆಚ್ಚ ನಿಗದಿ ಮಾಡಲಾಗಿದೆ' ಎಂದು ಅವರು ಮಾಹಿತಿ ನೀಡಿದರು.

‘ಮೋದಿಯವರು ಜನರ ಬಡ ಜನರ ಆರೋಗ್ಯ ರಕ್ಷಣೆಗಾಗಿ ಜಾರಿ ಮಾಡಿದ ಆಯುಷ್ಮಾನ್‌ ಯೋಜನೆಯನ್ನು ವಿಸ್ತರಿಸುವ ಕೆಲಸವನ್ನು ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದ ಸರಕಾರ ಮಾಡುತ್ತಿದೆ. ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚವನ್ನು ಭರಿಸುವ ಮಹತ್ವದ ಕ್ರಮವನ್ನು ಸರಕಾರ ಕೈಗೊಂಡಿದೆ. ಜೊತೆಗೆ, ಹೆಚ್ಚು ವೆಚ್ಚ ತಗುಲುವ ಚಿಕಿತ್ಸೆಗಳಿಗೂ ದರ ನಿಗದಿ ಮಾಡಿ, ಆ ವೆಚ್ಚ ಭರಿಸುವ ಕ್ರಮ ವಹಿಸಲಾಗುತ್ತಿದೆ. ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಇದರಿಂದ ಬಹಳಷ್ಟು ಪ್ರಯೋಜನವಾಗಲಿದೆ' ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News