ಟ್ವಿಟರ್ ಖಾತೆ ನಿರ್ಬಂಧ: ಪ್ರತ್ಯುತ್ತರ ದಾಖಲಿಸಲು ಟ್ವಿಟರ್ ಗೆ ಕಾಲಾವಕಾಶ ನೀಡಿದ ಹೈಕೋರ್ಟ್
ಬೆಂಗಳೂರು, ಸೆ.8: ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆ-2000ದ ಕಲಂ 69ಎಗೆ ವಿರುದ್ಧವಾಗಿರುವ 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು ಎಂಬ ನೋಟಿಸ್‍ಗಳನ್ನು ಪ್ರಶ್ನಿಸಿ ಟ್ವಿಟರ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆ.26ಕ್ಕೆ ಮುಂದೂಡಿದೆ. ಜತೆಗೆ, ಪ್ರತ್ಯುತ್ತರ ದಾಖಲಿಸಲು ಟ್ವಿಟರ್ ಗೆ 10 ದಿನಗಳ ಕಾಲಾವಕಾಶ ನೀಡಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿಗೊಳಿಸಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ಟ್ವಿಟರ್ ಪರ ವಾದಿಸಿದ ವಕೀಲರು, ಕೇಂದ್ರ ಸರಕಾರದ ಆಕ್ಷೇಪಣೆಗೆ ಪ್ರತ್ಯುತ್ತರ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಪ್ರತ್ಯುತ್ತರ ಸಲ್ಲಿಸಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಏನಿದು ಪ್ರಕರಣ: ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆ-2000ದ ಸೆಕ್ಷನ್ 69 ಎ ಅಡಿಯಲ್ಲಿ 2021ರ ಫೆ.2ರಿಂದ ವಿವಿಧ ದಿನಾಂಕಗಳಲ್ಲಿ ಹಲವು ನೋಟಿಸ್ ನೀಡಿರುವ ಕೇಂದ್ರ ಸರಕಾರವು 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳು ಹಾಗೂ 175 ಟ್ವಿಟ್‍ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಆದೇಶಿಸಿದೆ. ಇದು ಏಕಪಕ್ಷೀಯ ನಿರ್ಧಾರವಾಗಿದೆ, ಐಟಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.