PSI ನೇಮಕಾತಿ ಹಗರಣ: ಬಿಜೆಪಿ ಶಾಸಕ ದಢೇಸೂಗೂರು ಬಂಧನಕ್ಕೆ ಶಿವರಾಜ್ ತಂಗಡಗಿ ಆಗ್ರಹ
ಬೆಂಗಳೂರು, ಸೆ. 8: ‘ಪೊಲೀಸ್ ಸಬ್‍ಇನ್‍ಸ್ಪೆಕ್ಟರ್(ಪಿಎಸ್ಸೈ) ನೇಮಕಾತಿ ಹಗರಣದಲ್ಲಿ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸೆ.12ರೊಳಗೆ ಬಂಧಿಸಿ, ಸಮಗ್ರ ತನಿಖೆ ನಡೆಸಬೇಕು' ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದ್ದಾರೆ.
ಗುರುವಾರ ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಎಸ್ಸೈ ನೇಮಕಾತಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಡುಗಡೆಗೊಂಡ ಆಡಿಯೊದಲ್ಲಿರುವ ಧ್ವನಿ ನನ್ನದೇ ಎಂದು ಖುದ್ದು ಶಾಸಕರೇ ಒಪ್ಪಿಕೊಂಡಿದ್ದಾರೆ. ಪರಸಪ್ಪ ಎನ್ನುವವರು ನನ್ನ ಮಗನ ಪಿಎಸ್ಸೈ ನೇಮಕಾತಿಗೆ 15 ಲಕ್ಷ ರೂ. ಹಣ ಕೊಟ್ಟಿದ್ದೇನೆಂದು ಹೇಳಿದ್ದಾರೆ. ಇಷ್ಟೆಲಾ ದಾಖಲೆಗಳು ಇದ್ದರೂಸರಕಾರ ಈವರೆಗೂ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ' ಎಂದು ಪ್ರಶ್ನಿಸಿದರು.
‘ಪಿಎಸ್ಸೈ ಅಕ್ರಮಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, 15ಲಕ್ಷ ರೂ.ಹಣ ಪಡೆದಿರುವುದನ್ನು ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಒಪ್ಪಿಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ' ಎಂದು ಸಂಶಯ ವ್ಯಕ್ತಪಡಿಸಿದರು.
‘ಆಡಿಯೊ ಬಹಿರಂಗವಾದ ಬಳಿಕ ಪರಸಪ್ಪ ಎನ್ನುವವರನ್ನು ಕುಷ್ಟಗಿ ತಾಲೂಕಿನಿಂದ ಲಿಂಗಸಗೂರಿಗೆ ಕರೆದುಕೊಂಡು ಹೋಗಿ ಧಮ್ಕಿ ಹಾಕಿ ನಿಂದನೆ ಮಾಡಲಾಗಿದೆ. ಸರಕಾರಕ್ಕೆ ಹಣ ಕೊಟ್ಟಿದ್ದೇನೆ ಎನ್ನುವ ಅಂಶವೂ ಆಡಿಯೊದಲ್ಲಿದೆ. ಈ ಬಗ್ಗೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸಬೇಕು. ಕೂಡಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಶಾಸಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು' ಎಂದು ಶಿವರಾಜ್ ತಂಗಡಗಿ ಒತ್ತಾಯಿಸಿದರು.
ಇದನ್ನೂ ಓದಿ: ಏಷ್ಯಾ ಕಪ್ | ಪಾಕ್ ತಂಡ ಪರ ವಾಟ್ಸಪ್ ಸ್ಟೇಟಸ್ ಹಾಕಿದ ಆರೋಪ: ಕೋಲಾರದಲ್ಲಿ ಓರ್ವನ ಬಂಧನ