ಮೂಡಿಗೆರೆ | ಕಾಡಾನೆ ದಾಳಿ; ಕೂಲಿಕಾರ್ಮಿಕ ಮೃತ್ಯು

Update: 2022-09-08 14:07 GMT

ಚಿಕ್ಕಮಗಳೂರು, ಸೆ.8: ಕಾಫಿನಾಡಿಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಗುರುವಾರ ಸಂಜೆ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಕೆಲಸಕ್ಕೆ ಹೋಗಿ ಹಿಂದಿರುಗುತ್ತಿದ್ದ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿರುವ ಕಾಡಾನೆ ಕಾರ್ಮಿಕನನ್ನು ತುಳಿದು ಸಾಯಿಸಿರುವ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ಊರುಬಗೆ ಗ್ರಾಮದ ಅರ್ಜನ್(45) ಎಂದು ಗುರುತಿಸಲಾಗಿದೆ.

ಗ್ರಾಮದ ಕಾಫಿ ತೋಟವೊಂದಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಅರ್ಜುನ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮೂಡಿಗೆರೆ-ಗೋಣಿಬೀಡು ರಾಜ್ಯ ಹೆದ್ದಾರಿ ಪಕ್ಕದ ಪೊದೆಯಲ್ಲೇ ಇದ್ದ ಕಾಡಾನೆ ಏಕಾಏಕಿಯಾಗಿ ಅರ್ಜುನ್ ಮೇಲೆ ದಾಳಿ ನಡೆಸಿದೆ. ಈ ವೇಳೆ ನೆಲಕ್ಕೆ ಬಿದ್ದ ಅರ್ಜುನ್ ಮೇಲೆ ದಾಳಿ ಮಾಡಿರುವ ಕಾಡಾನೆ ಆತನನನ್ನು ತುಳಿದು ಕೊಂದು ಹಾಕಿದೆ ಎಂದು ತಿಳಿದು ಬಂದಿದೆ.

ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ದಾಳಿಗೆ ಕಳೆದ ಒಂದೇ ತಿಂಗಳಿನಲ್ಲಿ ಇಬ್ಬರು ಮೃತಪಟ್ಟಿದ್ದು, ಒಂದು ತಿಂಗಳ ಹಿಂದೆ ಜಾನುವಾರು ಹುಡುಕಲು ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದ ಕಾಡಾನೆ ಅವರನ್ನು ತುಳಿದ ಕೊಂದು ಹಾಕಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿ ನಡೆದಿರುವುದು ತಾಲೂಕಿನ ಗ್ರಾಮೀಣ ಭಾಗದ ಜನರಲ್ಲಿ ಭಾರೀ ಆತಂಕ ಮೂಡಿಸಿದೆ.

ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಪದೇಪದೇ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಕಾಡಾನೆಗಳ ಸ್ಥಳಾಂತಕ್ಕೆ ಕ್ರಮವಹಿಸದಿರುವ ಬಗ್ಗೆ ರೈತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಊರುಬಗೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿರುವ ಅರ್ಜುನ್ ಕುಟುಂಬಕ್ಕೆ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News