ಅನಧಿಕೃತ ಶಾಲೆಗಳ ಪಟ್ಟಿ ಕಳುಹಿಸಲು ಜಿಲ್ಲೆಗಳ ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಆದೇಶ

Update: 2022-09-08 14:31 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.8: ರಾಜ್ಯದಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿರುವ ಖಾಸಗಿ ಶಾಲೆಗಳ ಮಾಹಿತಿಯನ್ನು ತುರ್ತಾಗಿ ಪಟ್ಟಿ ಮಾಡಿ ಕಳುಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ಈ ಕುರಿತು ಆ.24 ಮತ್ತು 25ರಂದು ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲೇ ಸ್ಪಷ್ಟ ಸೂಚನೆ ನೀಡಿದ್ದರೂ ಇದುವರೆಗೆ ಬೆಂಗಳೂರು ನಗರ ಸೇರಿ ಕೇವಲ ನಾಲ್ಕು ಜಿಲ್ಲೆಗಳ ಅಧಿಕಾರಿಗಳು ಮಾತ್ರ ಶಾಲೆಗಳ ಪಟ್ಟಿ ಕಳುಹಿಸಿದ್ದು, ಉಳಿದ ಜಿಲ್ಲೆಗಳಿಂದ ಯಾವುದೇ ಮಾಹಿತಿ ಬಂದಿಲ್ಲ. 

ಹೀಗಾಗಿ, ಇಲಾಖಾ ಆಯುಕ್ತ ಆರ್.ವಿಶಾಲ್ ಅವರು ಮತ್ತೊಮ್ಮೆ ಅಧಿಕಾರಿಗಳಿಗೆ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಮಾಹಿತಿ ಕಳುಹಿಸುವುದನ್ನು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. 

ಶಾಲೆಗಳ ವಿರುದ್ಧದ ಕ್ರಮಕ್ಕೆ ಕ್ಯಾಮ್ಸ್ ಸ್ವಾಗತ

ರಾಜ್ಯದಲ್ಲಿ ನಡೆಯುತ್ತಿರುವ ಅನಧಿಕೃತ ಶಾಲೆಗಳನ್ನು ಪತ್ತೆ ಮಾಡಿ ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ ಕ್ರಮವನ್ನು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಸ್ವಾಗತಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಕೇಂದ್ರ ಪಠ್ಯಕ್ರಮದ ಶಾಲೆಗಳ ನಿಯಂತ್ರಣವನ್ನು ರಾಜ್ಯ ಇಲಾಖೆ ಯಾವ ಕಾಯ್ದೆಯಡಿ ನಿಯಂತ್ರಿಸಲು ಸಾಧ್ಯವಿದೆ ಎಂಬ ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.  


ಪ್ರಧಾನಿಗೆ ಪತ್ರ: ಕ್ಯಾಮ್ಸ್‍ಗೆ ವಿವರಣೆ ನೀಡಲು ಶಿಕ್ಷಣ ಇಲಾಖೆ ಸೂಚನೆ

ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲಾ ಸಂಘಟನೆಗಳು ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಕುರಿತಂತೆ ಸಾಕ್ಷ್ಯಾಧಾರ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಕ್ಯಾಮ್ಸ್ ಸಂಘಟನೆಗೆ ಕೋರಿದ್ದಾರೆ. ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದಿದ್ದ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‍ಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸೆ.9ರಂದು ಕಚೇರಿಗೆ ಹಾಜರಾಗಿ ವಿವರಣೆ ನೀಡುವಂತೆ ಆಯುಕ್ತ ಡಾ.ವಿಶಾಲ್ ಪತ್ರ ಬರೆದಿದ್ದಾರೆ. 

ಸಿಲಿಕಾನ್‍ಸಿಟಿಯಲ್ಲಿ 51 ಅನಧಿಕೃತ ಖಾಸಗಿ ಶಾಲೆಗಳು?

ರಾಜ್ಯದಲ್ಲಿ ಅನುಮತಿಯನ್ನೇ ಪಡೆಯದೆ ನಡೆಯುತ್ತಿರುವ ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಇಂಥ 51 ಶಾಲೆಗಳನ್ನು ಪತ್ತೆ ಮಾಡಿ ನೋಟಿಸ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News