ನೀಟ್‍ನಲ್ಲಿ ‘ಶಾಹೀನ್’ ಕಾಲೇಜಿನ ಮಹಮ್ಮದ್ ಅಲಿ ಇಕ್ಬಾಲ್‍ಗೆ 680 ಅಂಕ

Update: 2022-09-08 15:33 GMT
(ನೀಟ್‍ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು)

ಬೀದರ್: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET)ಯಲ್ಲಿ ಅತ್ಯುತ್ತಮ ಫಲಿತಾಂಶ ಗಳಿಸಿರುವ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು, ಸರ್ಕಾರಿ ಕೋಟಾದಡಿ 450 ಉಚಿತ ವೈದ್ಯಕೀಯ ಸೀಟುಗಳನ್ನು ಪಡೆಯುವ ನಿರೀಕ್ಷೆಯಲ್ಲಿದೆ.

ಕಾಲೇಜಿನ ಒಬ್ಬರು ವಿದ್ಯಾರ್ಥಿ ಸಾವಿರದ ಒಳಗೆ, ಮೂವರು ಎರಡು ಸಾವಿರದ ಒಳಗೆ, ಐವರು ಮೂರು ಸಾವಿರದ ಒಳಗೆ, ಏಳು ಮಂದಿ ನಾಲ್ಕು ಸಾವಿರದ ಒಳಗೆ ಹಾಗೂ ಎಂಟು ಜನ ಐದು ಸಾವಿರದ ಒಳಗೆ ರ‍್ಯಾಂಕ್‌ ಗಳಿಸಿ ಗಮನ ಸೆಳೆದಿದ್ದಾರೆ.

ಹಾಫಿಝ್ ಕೋರ್ಸ್ ಪೂರ್ಣಗೊಳಿಸಿ, ಕಾಲೇಜಿನ ‘ಅಕಾಡೆಮಿಕ್ ಇಂಟೆನ್ಸಿವ್ ಕೇರ್ ಯುನಿಟ್’(ಎಐಸಿಯು)ನಲ್ಲಿ ಬೆಸಿಕ್ ಕಲಿತ ಬೆಂಗಳೂರಿನ ಮಹಮ್ಮದ್ ಅಲಿ ಇಕ್ಬಾಲ್ 720 ಅಂಕಗಳ ಪೈಕಿ 680 ಅಂಕ ಪಡೆದು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ 834ನೇ ರ್ಯಾಂಕ್ (ಕೆಟೆಗರಿ ರ್ಯಾಂಕ್ 210) ಪಡೆದಿದ್ದಾರೆ.

ಸೈಯದ್ ನಿಝಾಮುದ್ದಿನ್ 1,087ನೇ ರ‍್ಯಾಂಕ್‌, ಪ್ರೇರಣಾ ಪಾಟೀಲ 1,138ನೇ ರ‍್ಯಾಂಕ್‌, ಮುಹಮ್ಮದ್ ನೊಮಾನ್ ಹಸನ್ 2,204ನೇ ರ್ಯಾಂಕ್, ವಿಶಾಲ್ ಚಿಮಕೋಡೆ 2,257ನೇ ರ‍್ಯಾಂಕ್‌, ಉಝ್ಮಾ 3,282ನೇ ರ‍್ಯಾಂಕ್‌ ಮಹಮ್ಮದ್ ಅಸಿಲ್ ಖಾನ್ 3,287ನೇ ರ‍್ಯಾಂಕ್‌ ಹಾಗೂ ಸುಜಲ್ ಬಿರಾದಾರ 4,224ನೇ ರ‍್ಯಾಂಕ್‌ ಗಳಿಸಿ ಸಾಧನೆಗೈದಿದ್ದಾರೆ.

ಸನ್ಮಾನ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಶಾಲು ಹೊದಿಸಿ ಸನ್ಮಾನಿಸಿ, ಪ್ರೋತ್ಸಾಹಿಸಿದರು.

ನೀಟ್‍ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಲಭಿಸಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಹಾಫಿಝ್ ಕೋರ್ಸ್ ಮುಗಿಸಿ, ಕಾಲೇಜಿನಲ್ಲಿ ಬೆಸಿಕ್ ಕಲಿತು, ಪಿಯುಸಿ ಪೂರ್ಣಗೊಳಿಸಿದ 12 ವಿದ್ಯಾರ್ಥಿಗಳು ನೀಟ್‍ನಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಒಟ್ಟಾರೆ ಸಾಧಕರಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದ, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಒಟ್ಟು 450 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಗಳಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಗುಣಮಟ್ಟದ ಶಿಕ್ಷಣದಿಂದಾಗಿ ಕಾಲೇಜು ಸರ್ಕಾರಿ ಕೋಟಾದಡಿ ಪಡೆಯುತ್ತಿರುವ ಉಚಿತ ವೈದ್ಯಕೀಯ ಸೀಟುಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಿಸಿಕೊಳ್ಳುತ್ತಲೇ ಇದೆ. 10 ವರ್ಷಗಳ ಅವಧಿಯಲ್ಲಿ 2,900 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಗಿಟ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.

ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮರಳಿ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ರಯತ್ನ ನಡೆಸಿದೆ. ಶಾಲೆ ಬಿಟ್ಟ ಹಾಗೂ ಹಾಫಿಜ್ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ದಿಸೆಯಲ್ಲಿ ಕಾಲೇಜು ಪ್ರಯತ್ನ ಹೆಚ್ಚು ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

'ವೈದ್ಯಕೀಯ ಕೋರ್ಸ್ ಕನಸು ನನಸಾಗಿದೆ'

ನೀಟ್‍ನಲ್ಲಿ 680 ಅಂಕಗಳು ಬಂದಿರುವುದರಿಂದ ಅತೀವ ಖುಷಿಯಾಗಿದೆ. ಶಾಹೀನ್ ಸಹಕಾರದಿಂದಾಗಿ ನನ್ನ ವೈದ್ಯಕೀಯ ಕೋರ್ಸ್ ಕನಸು ನನಸಾಗಿದೆ ಎಂದು ಹಾಫಿಜ್ ಕೋರ್ಸ್ ಪೂರೈಸಿ, ನೀಟ್‍ನಲ್ಲಿ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿರುವ ಮಹಮ್ಮದ್ ಅಲಿ ಇಕ್ಬಾಲ್ ಹೇಳಿದರು.

ಶಾಹೀನ್‍ನಲ್ಲೇ ಬೆಸಿಕ್ ಪೂರ್ಣಗೊಳಿಸಿ, ಪಿಯುಸಿ ಪ್ರಥಮ ಹಾಗೂ ದ್ವಿತೀಯ ವ್ಯಾಸಂಗ ಮಾಡಿದ್ದೇನೆ. ಗುಣಮಟ್ಟದ ಶಿಕ್ಷಣದ ಕಾರಣ ದ್ವಿತೀಯ ಪಿಯುಸಿಯಲ್ಲಿ ಶೇ 96 ರಷ್ಟು ಅಂಕಗಳು ದೊರೆತಿದ್ದವು. ನೀಟ್‍ನಲ್ಲಿ 720 ರ ಪೈಕಿ 680 ಅಂಕಗಳು ಬಂದಿವೆ. ಅಖಿಲ ಭಾರತ ಮಟ್ಟದ ರ‍್ಯಾಂಕ್‌ 834 ಹಾಗೂ ಕೆಟೆಗರಿ ರ‍್ಯಾಂಕ್‌ 210 ಆಗಿದೆ ಎಂದು ಅವರು ತಿಳಿಸಿದರು. ನವದೆಹಲಿ, ಭೋಪಾಲ್‍ನ ಏಮ್ಸ್ ನಲ್ಲಿ ಸೀಟು ಪಡೆಯುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News