ಬಿಜೆಪಿಯದ್ದು ಜನೋತ್ಸವವಲ್ಲ, ಜಲೋತ್ಸವ: ಎಂ.ಬಿ.ಪಾಟೀಲ್ ಟೀಕೆ

Update: 2022-09-08 15:52 GMT

ಬೆಂಗಳೂರು, ಸೆ. 8: ‘ಉದ್ಯಾನನಗರಿ ಬೆಂಗಳೂರು ನಗರ ಮಳೆ ನೀರಿನಲ್ಲಿ ಮುಳುಗಿದೆ. ಮೂರು ವರ್ಷದಿಂದ ಬಿಜೆಪಿ ಏನು ಮಾಡಿದೆ ಎಂದು ಜನರಿಗೆ ಹೇಳಬೇಕಿದೆ. ಬಿಜೆಪಿ ಸರಕಾರದ ‘ಜನೋತ್ಸವವಲ್ಲ, ಬದಲಿಗೆ ‘ಜಲೋತ್ಸವ' ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಒತ್ತುವರಿ ತೆರವು ಮಾಡಲು ಮುಂದಾಗಿತ್ತು. ಆದರೆ, ಕಾರಣಾಂತರದಿಂದ ಸ್ವಲ್ಪ ತಡೆ ಉಂಟಾಗಿ ಪೂರ್ಣ ಪ್ರಮಾಣದಲ್ಲಿ ಮಾಡಲು ಆಗಲಿಲ್ಲ. ಇದೀಗ ಬಿಜೆಪಿ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡಲಾಗುತ್ತಿದೆ' ಎಂದು ದೂರಿದರು.

‘ಹಿಂದಿನ ಸರಕಾರಗಳ ವಿರುದ್ದ ಆರೋಪ ಮಾಡುವುದನ್ನು ಬಿಟ್ಟು, ಕಾಂಗ್ರೆಸ್ ಕಾಲದಲ್ಲಿ ಆಗಿದೆ, ಬ್ರಿಟಿಷರ ಕಾಲದಲ್ಲಿ ಆಗಿದೆ ಎಂದು ಹೇಳುದರಲ್ಲಿ ಅರ್ಥ ಇಲ್ಲ. ಇದೀಗ ಮಳೆ ಮತ್ತು ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಕಾರ ಸೂಕ್ತ ಪರಿಹಾರ ಕಲ್ಪಿಸಬೇಕು. ಬೆಂಗಳೂರು ನಗರ ನೀರಲ್ಲಿದ್ದ ವೇಳೆ ಸರಕಾರ ಏನು ಸ್ಪಂದನೆ ಮಾಡಿದೆ? ಎಂದು ಪಾಟೀಲ್ ಪ್ರಶ್ನಿಸಿದರು.

‘ಬಿಜೆಪಿಯ ಎನ್.ಆರ್.ರಮೇಶ್ ಅವರು ಸುಖಾಸುಮ್ಮನೆ ಮೋಹನ್ ದಾಸ್ ಪೈ ವಿರುದ್ದ ಆರೋಪ ಮಾಡುವುದು ಸರಿಯಲ್ಲ. ಬೆಂಗಳೂರು ವೆನಿಸ್ ಮಾದರಿಯಲ್ಲಿ ಆಗಿದೆ. ಬೋಟ್‍ನಲ್ಲಿ ಓಡಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಈ ಸ್ಥಿತಿಯಲ್ಲಿ ಜನೋತ್ಸವದ ಅಗತ್ಯ ಏನಿದೆ? ಮೊದಲು ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮುಖ್ಯಮಂತ್ರಿ ಮತ್ತು ಸಚಿವರು ನೆರವಾಗಬೇಕು' ಎಂದು ಪಾಟೀಲ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News