ರಘುನಾಥ್ ಅನುಮಾನಾಸ್ಪದ ಸಾವು ಪ್ರಕರಣ: ಆದಿಕೇಶವುಲು ಪುತ್ರನ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

Update: 2022-09-08 17:10 GMT

ಬೆಂಗಳೂರು, ಸೆ.8: ಉದ್ಯಮಿ ಆದಿಕೇಶವುಲು ಆಪ್ತನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ಸೇರಿ ನಾಲ್ವರ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ ನೀಡಿದೆ.

ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಸೂಚಿಸಿದೆ. ಈ ಪ್ರಕರಣದಲ್ಲಿ ಮೂರು ಆಯಾಮಗಳಲ್ಲಿ ತನಿಖೆ ನಡೆಸುವಂತೆ ನ್ಯಾಯಪೀಠ ಆದೇಶಿದೆ. ನಕಲಿ ಛಾಪಾ ಕಾಗದ ಬಳಕೆ, ನಕಲಿ ವಿಲ್ ಸೃಷ್ಟಿಸಿರುವ, ಆದಿಕೇಶವಲು ಆಪ್ತ ರಘುನಾಥ್ ಹತ್ಯೆ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿ ವರದಿ ಸಲ್ಲಿಸಬೇಕು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಸಿರುವ ಬಿ. ರಿಪೋರ್ಟ್‍ನ ಯಾವುದೇ ಅಂಶಗಳನ್ನು ಸಿಬಿಐ ಪರಿಗಣಿಸಬಾರದು. ಇದೀಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ತನಿಖೆ ಮುಗಿಯುವ ತನಕ ಸ್ಥಗಿತಗೊಳಿಸಬೇಕು ಎಂದು ನ್ಯಾಯಪೀಠವು ಆದೇಶಿಸಿದೆ.

ಪ್ರಕರಣವೇನು: ರಘುನಾಥ್, ಉದ್ಯಮಿ ಆದಿಕೇಶವುಲು ಆಪ್ತರಾಗಿದ್ದರು. 2013ರ ಎ. 24ರಂದು ಆದಿಕೇಶವುಲು ಮೃತಪಟ್ಟಿದ್ದರು. ಈ ವೇಳೆ ರಘುನಾಥ್ ಹೆಸರಿನಲ್ಲಿದ್ದ ಆಸ್ತಿ ವರ್ಗಾಯಿಸಲು ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ಒತ್ತಡ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಬಳಿಕ ರಘುನಾಥ್ 2016ರಲ್ಲಿ ಪತ್ನಿ ಮಂಜುಳಾ ಹೆಸರಿಗೆ ವಿಲ್ ಬರೆದಿದ್ದರು. 2019ರ ಮೇ 4ರಂದು ರಘುನಾಥ್ ನೇಣುಬಿಗಿದ ಸ್ಥಿತಿಯಲ್ಲಿ ಆದಿ ಕೇಶವುಲು ಅವರಿಗೆ ಸೇರಿದ ಅತಿಥಿ ಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆದಿ ಕೇಶವಲು ಅವರಿಗೆ ಸೇರಿದ ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಇದು ಆತ್ಮಹತ್ಯೆ ಎಂದು ಪ್ರಕರಣ ಎಂದು ಬಿಂಬಿಸಿ ಮುಕ್ತಾಯಗೊಳಿಸಲಾಗಿತ್ತು. ಆದರೆ 2020ರ ಫೆ.15ರಂದು ರಘುನಾಥ್ ಪತ್ನಿ ಇದು ಕೊಲೆ ಎಂದು ಶಂಕಿಸಿ ದೂರು ನೀಡಲು ಮುಂದಾಗಿದ್ದರು. ದೂರು ಸ್ವೀಕರಿಸದಿದ್ದಾಗ ಖಾಸಗಿ ದೂರು ಸಲ್ಲಿಸಿದ್ದರು.

ಪ್ರಕರಣ ಕೈಗೆತ್ತಿಕೊಂಡ ಎಸ್‍ಐಟಿ ತನಿಖೆ ನಡೆಸಿ ಆರೋಪದಲ್ಲಿ ಹುರುಳಿಲ್ಲ ಎಂದು ವರದಿ ನೀಡಿತ್ತು. ಆಗ ಎಂ.ಮಂಜುಳಾ, ರೋಹಿತ್ ಎಸ್‍ಐಟಿಯ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿ, ತನಿಖೆಯನ್ನು ಸಿಬಿಐಗೆ ನೀಡುವಂತೆ ಕೋರಿ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆದಿದ್ದು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News