ತುಮಕೂರು ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ: ಪ್ರಭಾವತಿ ಮೇಯರ್, ಬಿ.ಕೆ.ನರಸಿಂಹಮೂರ್ತಿ ಉಪಮೇಯರ್

Update: 2022-09-09 12:08 GMT

ತುಮಕೂರು.ಸೆ.09:ಇಂದು ನಡೆದ ತುಮಕೂರು ಮಹಾನಗರಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಫಲವಾಗಿ ಮೇಯರ್ ಆಗಿ ಕಾಂಗ್ರೆಸ್ ನ ಪ್ರಭಾವತಿ ಎಂ.ಸುಧೀಶ್ವರ್, ಉಪಮೇಯರ್ ಆಗಿ ಜೆಡಿಎಸ್‍ನ ಬಿ.ಕೆ.ನರಸಿಂಹಮೂರ್ತಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ 9ನೇ ವಾರ್ಡಿನ ಪ್ರಭಾವತಿ ಎಂ.ಸುಧೀಶ್ವರ್ ಮತ್ತು 20ನೇ ವಾರ್ಡಿನ ದೀಪಶ್ರೀ ಶೆಟ್ಟಾಳಯ್ಯ ಸ್ಪರ್ಧೆಯಲ್ಲಿದ್ದರೆ, ಪಕ್ಷದ ನಾಯಕರ ತೀರ್ಮಾನದಂತೆ ಇಬ್ಬರಿಗೆ ತಲಾ 6 ತಿಂಗಳ ಅಧಿಕಾರಕ್ಕೆ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿ, ಮೊದಲ ಅವಧಿಗೆ ಪ್ರಭಾವತಿ, ಎರಡನೇ ಅವಧಿಗೆ ದೀಪಶ್ರೀ ಅವರಿಗೆ ಎಂಬಂತೆ ರಾಜಿ ಸೂತ್ರ ನಡೆಸಿ, ಒಂದೇ ನಾಮಪತ್ರ ಸಲ್ಲಿಕೆಯಾಗುವಂತೆ ಮಾಡಿ, ಮೇಯರ್ ಪಟ್ಟವನ್ನು ತನ್ನ ವಶ ಮಾಡಿಕೊಂಡಿತ್ತು.

ಬಿ.ಸಿ.ಎಂ.(ಎ)ಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಒಟ್ಟು ಮೂರು  ಪಕ್ಷಗಳಿಂದ 21 ಜನರು ಸ್ಪರ್ಧಿಸಲು ಅವಕಾಶವಿತ್ತು.ಮೇಯರ್ ಸ್ಪರ್ಧೆಗೆ ಅವಕಾಶವಿಲ್ಲದ ಜೆಡಿಎಸ್ ಉಪಮೇಯರ್ ಹುದ್ದೆಗಾಗಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಜೆಡಿಎಸ್‍ನ ಮಂಜುನಾಥ್(ಹೆಚ್.ಡಿ.ಕೆ.ಮಂಜು)ಮತ್ತು 23ನೇ ವಾರ್ಡಿನ ನರಸಿಂಹಮೂರ್ತಿ ನಡುವೆ ಪೈಪೋಟಿ ಇದ್ದು, ಜೆಡಿಎಸ್ ಜೊತೆಗೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡ ಹಿನ್ನೇಲೆಯಲ್ಲಿ ಇಬ್ಬರೂ ಸದಸ್ಯರಿಗೆ ಕಾಂಗ್ರೆಸ್ ಪಕ್ಷದ ರೀತಿಯಲ್ಲಿಯೇ ತಲಾ 6 ತಿಂಗಳ ಅವಕಾಶ ನೀಡಿ,ಮೊದಲ ಅವಧಿಗೆ ನರಸಿಂಹಮೂರ್ತಿ,2ನೇ ಅವಧಿಗೆ ಮಂಜುನಾಥ್ ಅವರಿಗೆ ನಿಗಧಿಗೊಳಿಸಿದ್ದ ಪರಿಣಾಮ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ನರಸಿಂಹಮೂರ್ತಿ ಸ್ಪರ್ಧೆ ಮಾಡಿ ಅವಿರೋಧವಾಗಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.ಬಿಜೆಪಿಯಿಂದ ಉಪಮೇಯರ್ ಕಣದಲ್ಲಿದ್ದ ಮಲ್ಲಿಕಾರ್ಜುನಯ್ಯ ತಮ್ಮ ನಾಮಪತ್ರ ವಾಪಸ್ ಪಡೆದ ಕಾರಣ. ಅವಿರೋಧ ಆಯ್ಕೆ ಸುಗಮವಾಯಿತು.

ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗೀಯ ಕಂದಾಯ ಆಯುಕ್ತ ಅಮ್ಲಾನ್ ಅದಿತ್ಯ ಬಿಸ್ಮಾಸ್,ಉಪ ಚುನಾವಣಾಧಿಕಾರಿಯಾಗಿ ಅಪರ ಪ್ರಾದೇಶಿಕ ಆಯುಕ್ತ ಶ್ರೀಪಾದ್ ಅವರುಗಳು ಕಾರ್ಯನಿರ್ವಹಿಸಿದ್ದರು.ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ ಕ್ರಮವಾಗಿ ಪ್ರಭಾವತಿ ಎಂ.ಮತ್ತು ಬಿ.ಕೆ.ನರಸಿಂಹಮೂರ್ತಿ ಅವರುಗಳು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಣೆ ಮಾಡಿದರು.

ನೂತನ ಮೇಯರ್ ಮತ್ತು ಉಪಮೇಯರ್ ಅವರನ್ನು ಅಭಿನಂದಿಸಿ ಮಾತನಾಡಿದ ಸಂಸದ ಜಿ.ಎಸ್.ಬಸವರಾಜು, ತುಮಕೂರು ಮಹಾನಗರ ಪಾಲಿಕೆ ಸ್ವಚ್ಚತೆಯಲ್ಲಿ 6ನೇ ಸ್ಥಾನದಲ್ಲಿದೆ.ಇಬ್ಬರು ಪಕ್ಷಾತೀತವಾಗಿ ಕೆಲಸ ಮಾಡುವ ಮೂಲಕ ನಗರಪಾಲಿಕೆಗೆ ಒಳ್ಳೆಯ ಹೆಸರು ತರಬೇಕು. ಕನಿಷ್ಠ ದಿನದ 3-4 ಗಂಟೆಯಾದರೂ ಕಚೇರಿಯಲ್ಲಿದ್ದು, ಜನರ ಅಹವಾಲುಗಳನ್ನು ಆಲಿಸುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಸಲಹೆ ನೀಡಿದರು.

ನೂತನ ಮೇಯರ್ ಪ್ರಭಾವತಿ ಮಾತನಾಡಿ,ನಗರದ ಪ್ರಥಮ ಪ್ರಜೆಯಾಗಿ ನಾನು ಆಯ್ಕೆಯಾಗಲು ಸಹಕಾರ ನೀಡಿದ ಎಲ್ಲಾ ಸದಸ್ಯರಿಗೂ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಿಗೂ, ಸ್ಥಳೀಯ ಶಾಸಕರು, ಸಂಸದರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.ಎಲ್ಲಾ ಸದಸ್ಯರ ಸಹಕಾರದಿಂದ ಉತ್ತಮ ಕೆಲಸ ಮಾಡಬೇಕೆಂಬ ಹಂಬಲ ಹೊಂದಿದ್ದೇನೆ.ನನ್ನ ಪತಿ ಸುಧೀಶ್ವರ್ ಅವರು ಸಹ ಆರು ತಿಂಗಳ ಕಾಲ 2018ರಲ್ಲಿ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. ಇಂದು ಅದೇ ಸ್ಥಾನದಲ್ಲಿ ನಾನಿದ್ದೇನೆ. ಅವರ ಆಶಯಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.

ಇದನ್ನೂ ಓದಿ>>> ಮಂಗಳೂರು ಮನಪಾ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಆಯ್ಕೆ, ಪೂರ್ಣಿಮಾ ಉಪ ಮೇಯರ್ 

ನೂತನ ಉಪಮೇಯರ್ ಬಿ.ಕೆ.ನರಸಿಂಹಮೂರ್ತಿ ಮಾತನಾಡಿ,ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಜನರ ಮತ್ತು ಸದಸ್ಯರ ನಂಬಿಕೆ ಉಳಿಸಿಕೊಂಡು ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ನೂತನ ಮೇಯರ್ ಮತ್ತು ಉಪಮೇಯರ್ ಅವರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್, ಅಭಿವೃದ್ದಿಯ ಚಿಂತನೆಯ ಹಿನ್ನೇಲೆಯಲ್ಲಿ ನೀವು ಅವಿರೋಧವಾಗಿ ಆಯ್ಕೆಯಾಗಿದ್ದೀರಿ. ಕಳೆದ ಕೆಲದಿನಗಳ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ.ಮೊದಲು ರಾಜಗಾಲುವೆಯ ದುರಸ್ತಿ ಮಾಡುವ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಿ, ಹಾಗೆಯೇ ಭವಿಷ್ಯದಲ್ಲಿ ಮಳೆಯಿಂದ ಹಾನಿಯಾಗದಂತೆ ರಾಜಗಾಲುವೆ ದುರಸ್ತಿಗೆ ಡಿಪಿಆರ್ ತಯಾರಿಸಿ, ಸರಕಾರಕ್ಕೆ ಕಳುಹಿಸಿ, ಅನುದಾನ ಪಡೆದು ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು. 

ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ನೂತನ ಮೇಯರ್ ಮತ್ತು ಉಪಮೇಯರ್ ಅವರುಗಳಿಗೆ ಅಭಿನಂದಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು, ಪಕ್ಷದ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News