ಪ್ರವಾಹಕ್ಕೆ ಬಡ ಮಕ್ಕಳು ಕಂಗಾಲು: ಸರಕಾರ ನೆರವಾಗುವಂತೆ ನಿರಂಜನಾರಾಧ್ಯ ವಿ.ಪಿ ಒತ್ತಾಯ

Update: 2022-09-09 12:29 GMT
ನಿರಂಜನಾರಾಧ್ಯ 

ಬೆಂಗಳೂರು: ಇತ್ತೀಚಿಗೆ ಸುರಿದ ಅಪಾರ ಪ್ರಮಾಣದ ಮಳೆ ಪರಿಣಾಮದಿಂದ ಬೆಂಗಳೂರ ನಗರ ಸೇರಿದಂತೆ ಗ್ರಾಮೀಣ, ಕೊಳಚೆ ಪ್ರದೇಶದ ಬಡ ಮತ್ತು ನಿರ್ಗತಿಕ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದು ಶಿಕ್ಷಣ ಇಲಾಖೆ ಅವರ ನೆರವಿಗೆ ಧಾವಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮಹಾ ಪೋಷಕರಾದ ನಿರಂಜನಾರಾಧ್ಯ ವಿ.ಪಿ ಒತ್ತಾಯಿಸಿದ್ದಾರೆ.

ಬೆಂಗಳೂರಿನ ತಗ್ಗು ಪ್ರದೇಶದ ಕೊಳಚೆ ನಿವಾಸಿಗಳ ಮತ್ತು ದುರ್ಬಲ ವರ್ಗದ ಮಕ್ಕಳ ಪಠ್ಯ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು ಇತರೆ ಕಲಿಕಾ ಸಾಮಗ್ರಿಗಳು ಇತ್ತೀಚಿಗೆ ವಿಪರೀತವಾಗಿ ಸುರಿದ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಬಡ ಮಕ್ಕಳು ಮರಳಿ ಶಾಲೆಗೆ ಹೋಗಲು ಹಾಗೂ ಅವರ ಕಲಿಕೆಗೆ ತೀವ್ರ ತೋದರೆಯಾಗಿದ್ದರಿಂದ ಶಿಕ್ಷಣ ಸಚಿವರು ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ  ಎಚ್‍ಎಎಲ್, ಮಹದೇವಪುರ, ಸರ್ಜಾಪುರ, ಬೆಳಂದೂರು, ಪೀಣ್ಯ  ಹಾಗೂ ಮಾಗಡಿ ರಸ್ತೆಯ ಪ್ರದೇಶಗಳಲ್ಲಿ ನೆಲೆಸಿದ ಮಕ್ಕಳು ತೀವ್ರ ಮಳೆಯಿಂದಾಗಿ ವಿಕೋಪ ಎದುರಿಸುತ್ತಿದ್ದಾರೆ. ಈ ಹಿಂದೆ ಕೋವಿಡ್‍ನಿಂದ ಅತೀವ ಸಂಕಷ್ಟಕ್ಕೆ ಒಳಗಾಗಿ ಚೇತರಿಸಿಕೊಳ್ಳುವಷ್ಟರಲ್ಲಿ, ಮತ್ತೀಗ ಪ್ರವಾಹಕ್ಕೆ ಬಲಿಪಶುವಾಗಿದ್ದಾರೆ. ಅದಕ್ಕೆ ಶಿಕ್ಷಣ ಇಲಾಖೆ ಇವರತ್ತ ಗಮನವಹಿಸಿ ಮಕ್ಕಳ ಕಲಿಕೆಗೆ ಕಲಿಕಾ ಸಾಮಗ್ರಿಗಳನ್ನು ಪೂರೈಸಲು ಕ್ರಮವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

-----------------------------------------------

ಶಿಕ್ಷಣ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಮೂಲಕ ಮನವಿ ಮಾಡಿದ್ದಾರೆ. ಅವುಗಳೆಂದರೆ ,

1.ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಂಚಾಯತಿ ಹಾಗು ನಗರ ಸ್ಥಳೀಯ ಸರ್ಕಾರಗಳ/ಪಾಲಿಕೆಗಳ  ಸಹಯೋಗದಲ್ಲಿ ಮಳೆಯಿಂದ ಶಾಲೆಗಳ ಭೌತಿಕ ಹಾಗು ಕಲಿಕಾ ಸಾಮಗ್ರಿಗಳ ನಷ್ಟದ ಅಂದಾಜಿನ  ಗಾತ್ರವನ್ನು ನಿರ್ಣಯಿಸಬೇಕು.

2.ಶಿಕ್ಷಣ ಸಚಿವರು ಹಾಗು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳಿಗೆ ಹಾಗು ಪಾಲಕರಿಗೆ ಸಾಂತ್ವನ ಹೇಳುವ ಮೂಲಕ  ವಿದ್ಯಾರ್ಥಿ ಶಿಕ್ಷಕರ ಕಲ್ಯಾಣ ನಿಧಿಯಿಂದ ತುರ್ತು ಪರಿಹಾರಕ್ಕೆ ಕ್ರಮವಹಿಸಬೇಕು. 

3.ಮಳೆಯಿಂದ  ತೀವ್ರ ಹಾನಿಗೊಳಗಾಗಿರುವ ಶಾಲೆಗಳನ್ನು ತಕ್ಷಣ ದುರಸ್ಥಿಗೊಳಿಸಿ ಕಲಿಕೆಗೆ ಅಣಿಗೊಳಿಸಲು  ಅಗತ್ಯ ಅನುದಾನಗಳನ್ನು ತುರ್ತಾಗಿ ಶಾಲಾ ಹಂತದ ಎಸ್‌ಡಿಎಂಸಿಗಳಿಗೆ ಬಿಡುಗಡೆಗೊಳಿಸಬೇಕು.   

4.ಕಲಿಕಾ ಸಾಮಗ್ರಿಗಳಾದ ಪಠ್ಯಪುಸ್ತಕ, ಕಾರ್ಯ ಪುಸ್ತಕ, ಪೂರಕ ಸಂಪನ್ಮೂಲ, ಇತ್ಯಾದಿ ಸಾಮಗ್ರಿಗಳನ್ನು ಒದಗಿಸಲು ಇಲಾಖೆ ತುರ್ತು ಕ್ರಮವಹಿಸಬೇಕು.  

5.ಇಂಥಹ  ಸಂದರ್ಭದಲ್ಲಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಬಹುದಾದ ಹೆಣ್ಣು ಹಾಗು ಅಂಗವಿಕಲ ಮಕ್ಕಳ ಬಗ್ಗೆ ವಿಶೇಷ  ಗಮನಹರಿಸಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News