ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯ | ಆದೇಶ ಹೊರಡಿಸಿದ ಎರಡೇ ದಿನದಲ್ಲೇ ನಿರ್ಲಕ್ಷ್ಯ: ಟಿ.ಎಸ್.ನಾಗಾಭರಣ

Update: 2022-09-09 12:47 GMT
ಟಿ.ಎಸ್.ನಾಗಾಭರಣ

ಬೆಂಗಳೂರು, ಸೆ. 9: ‘ಕೇಂದ್ರ ರಸ್ತೆ ಸಾರಿಗೆ ಹಾಗೂ ಭೂ ಹೆದ್ದಾರಿ ಇಲಾಖೆ ವತಿಯಿಂದ ಆಯೋಜಿಸಲಾದ ಮಂಥನ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕನ್ನಡವನ್ನು ನಿರ್ಲಕ್ಷ್ಯ ಮಾಡಿ ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ಪ್ರಾಧಾನ್ಯತೆ ನೀಡಿರುವ ಕುರಿತು ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆಗ್ರಹಿಸಿದ್ದಾರೆ. 

‘ಕನ್ನಡವನ್ನು ರಾಜ್ಯದಾದ್ಯಂತ ಆಡಳಿತ ಭಾಷೆಯಾಗಿ ಕಡ್ಡಾಯವಾಗಿ ಎಲ್ಲ ಹಂತದಲ್ಲೂ ಜಾರಿಗೆ ತರಲಾಗಿದೆ. ಎಲ್ಲ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸರಕಾರ ಆದೇಶಿಸಿದೆ. ಆದಾಗ್ಯೂ ಸೆ.8ರಂದು ಲೋಕೋಪಯೋಗಿ ಇಲಾಖೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ' ಎಂದು ಅವರು ದೂರಿದ್ದಾರೆ.

‘ಸೆ.6ರಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. ಇದಲ್ಲದೆ ಜನವರಿ 10ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಧಾನ್ಯತೆ ನೀಡುವಂತೆ ಪತ್ರವನ್ನು ಬರೆಯಲಾಗಿತ್ತು' ಎಂದು ಅವರು ತಿಳಿಸಿದ್ದಾರೆ.

‘ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸರಕಾರ ಆದೇಶ ಹೊರಡಿಸಿ 2 ದಿನಗಳಲ್ಲಿಯೇ ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವ ಕುರಿತು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಆಡಳಿತ ಭಾಷೆ ಕನ್ನಡವನ್ನು ಕಡೆಗಣಿಸಿರುವ ಕುರಿತು ಸಂಬಂಧಪಟ್ಟವರು ಕೂಡಲೇ ನೇರವಾಗಿ ಪ್ರಾಧಿಕಾರಕ್ಕೆ ಬಂದು ಭೇಟಿ ನೀಡುವಂತೆ ಹಾಗೂ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯಲಾಗಿದೆ' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News