VIDEO| ಮೂಡಿಗೆರೆಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ: ಅರಣ್ಯ ಇಲಾಖೆ ಕಚೇರಿ ಎದುರು ಮೃತದೇಹ ಇಟ್ಟು ಪ್ರತಿಭಟನೆ

Update: 2022-09-09 13:25 GMT

ಮೂಡಿಗೆರೆ ಸೆ.9; ತಾಲೂಕಿನ ಊರುಬಗೆ ಗ್ರಾಮದಲ್ಲಿ ಗುರುವಾರ ಸಂಜೆ ಕಾಡಾನೆಯೊಂದು ಕೂಲಿ ಕಾರ್ಮಿಕ ಅರ್ಜುನ್ ಎಂಬವರನ್ನು ತುಳಿದು ಕೊಂದಿರುವ ಘಟನೆ ಖಂಡಿಸಿ ಹಾಗೂ ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಸೇರಿದಂತೆ ರೈತರು, ಕಾಫಿ ಬೆಳೆಗಾರರು ಶುಕ್ರವಾರ ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಕಚೇರಿ ಎದುರು ಮೃತ ಅರ್ಜುನ್ ಅವರ ಮೃತದೇಹ ಇಟ್ಟು ಧರಣಿ ನಡೆಸಿದರು.

ಈ ವೇಳೆ ಅರಣ್ಯ ಇಲಾಖೆ  ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ನಿಯಂತ್ರಿಸಲು ಸ್ಥಳದಲ್ಲಿದ್ದ ಪೊಲೀಸರು ಧರಣಿ ನಿರತರ ಮೇಲೆ ಲಾಠಿ ಪ್ರಹಾರ ನಡೆಸಿದ ಘಟನೆಯೂ ನಡೆಯಿತು. 

ಗುರುವಾರ ಸಂಜೆ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಕೂಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಅರ್ಜನ್ ಎಂಬ ಕಾರ್ಮಿಕನ ಮೇಲೆ ದಾಳಿ ನಡೆಸಿದ ಕಾಡಾನೆ ಆತನನನ್ನು ತುಳಿದು ಕೊಂದು ಹಾಕಿತ್ತು. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗುರುವಾರ ಸ್ಥಳಕ್ಕಾಗಮಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಡಾನೆಗಳ ಸ್ಥಳಾಂತರಕ್ಕೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಇದರ ವಿರುದ್ಧ ಶುಕ್ರವಾರ ಅರಣ್ಯ ಇಲಾಖೆ ಕಚೇರಿ ಪ್ರತಿಭಟನೆ ಮಾಡಲು ನಿರ್ಣಯಿಸಿದ್ದರು.

ಅದರಂತೆ ಶುಕ್ರವಾರ ಬೆಳಗ್ಗೆ ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಅರ್ಜುನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗ್ರಾಮಸ್ಥರು ಆಸ್ಪತ್ರೆಯಿಂದ ಅರಣ್ಯ ಇಲಾಖೆವರೆಗೆ ಮೃತದೇಹದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ಈ ಸಂದಂರ್ಭದಲ್ಲಿ ಬೆಳೆಗಾರರ ಸಂಘದ ಅಧ್ಯಕ್ಷ ಭಾಲಕೃಷ್ಣ ಮಾತನಾಡಿ, ಊರುಬಗೆ ಭಾಗದಲ್ಲಿ 4 ಕಾಡಾನೆಗಳಿವೆ. ಅಲ್ಲದೇ ತಾಲೂಕಿನ ಕುಂದೂರು, ಕೆಂಜಿಗೆ,  ಹೊಸಕೆರೆ, ಬೈರಾಪುರ, ಬಾಳೂರು, ಗುತ್ತಿಹಳ್ಳಿಯಲ್ಲಿ, ಆಲೇಖಾನ್ ಹೊರಟಿ ಸೇರಿದಂತೆ ಅನೇಕ ಕಡೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳಿವೆ. ಇತ್ತೀಚೆಗಂತೂ ಕಾಡಾನೆ ಹಾವಳಿ ಮಿತಿ ಮೀರಿದೆ. ತೋಟಗದ್ದೆಗಳನ್ನು ನಾಶ ಮಾಡುತ್ತಿರುವುದಲ್ಲದೇ ಗ್ರಾಮಸ್ಥರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿವೆ. ಒಂದೇ ವರ್ಷದಲ್ಲಿ ಕಾಡಾನೆಗಳು ಮೂರು ಮಂದಿ ಅಮಾಯಕರನ್ನು ಬಲಿ ಪಡೆದಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು, ರೈತರು, ಕಾರ್ಮಿಕರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಗುರುವಾರ ಕಾಡಾನೆಗೆ ಕೂಲಿ ಕಾರ್ಮಿಕನೊಬ್ಬ ಬಲಿಯಾದ ಬಳಿ ರಾಜ್ಯ ಸರಕಾರ ಒಂದು ಆನೆಯನ್ನು ಹಿಡಿದು ಸ್ಥಳಾಂತರ ಮಾಡಲು ಆದೇಶಿದೆ. ಇದು ರೈತರ ಬಾಯಿ ಮುಚ್ಚಿಸುವ ತಂತ್ರಗಾರಿಕೆಯಾಗಿದೆ ಎಂದ ಅವರು, ಮಲೆನಾಡು ಭಾಗದಲ್ಲಿ ರೈತರ ಆತಂಕಕ್ಕೆ ಕಾರಣವಾಗಿರುವ ಎಲ್ಲ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಭವಿಷ್ಯದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಬಳಿಕ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮೋಟಮ್ಮ,  ಬಿ.ಬಿ.ನಿಂಗಯ್ಯ ಸೇರಿದಂತೆ ವಿವಿಧ ಪಕ್ಷ ಹಾಗೂ ಸಂಘಟನೆ ಮುಖಂಡರು ಅರಣ್ಯ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಶಾಸಕ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ಒಂದು ಕಾಡಾನೆ ಹಿಡಿಯಲು ಸರಕಾರ ಆದೇಶ ನೀಡಿದೆ. ಉಳಿದ ಕಾಡಾನೆಗಳನ್ನು ಸ್ಥಳಾಂತರಿಸಲು ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆಸುತ್ತೇನೆಂದು ಭರವಸೆ ನೀಡಿದ್ದರಿಂದ ಧರಣಿ ನಿರತರು ಧರಣಿ ಕೈಬಿಟ್ಟರು.

ಈ ವೇಳೆ ಪ.ಪಂ. ಸದಸ್ಯ ಪಿ.ಜಿ.ಅನುಕುಮಾರ್, ಊರುಬಗೆ ಗ್ರಾಪಂ ಅಧ್ಯಕ್ಷ ಸಂತೋಷ್, ಜಿ.ಪಂ. ಮಾಜಿ ಸದಸ್ಯ ನಿಖಿಲ್ ಚರ್ಕವರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಬಿಎಸ್ಪಿ ತಾಲೂಕು ಅಧ್ಯಕ್ಷ ಲೋಕವಳ್ಳಿ ರಮೇಶ್, ಮುಖಂಡರಾದ ಬಿ.ಕೆ.ಲಕ್ಷ್ಮಣ್‍ಕುಮಾರ್, ದೀಪಕ್ ದೊಡ್ಡಯ್ಯ, ಭರತ್ ಕನ್ನಹಳ್ಳಿ, ಡಿ.ಕೆ.ಮನೋಹರ್, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News