ನಾಳೆ ನಡೆಯಲಿರುವ ‘ಜನಸ್ಪಂದನ' ಕಾರ್ಯಕ್ರದಲ್ಲಿ 3ಲಕ್ಷ ಮಂದಿಗೆ ಊಟದ ವ್ಯವಸ್ಥೆ: ಸಚಿವ ಡಾ.ಸುಧಾಕರ್

Update: 2022-09-09 14:21 GMT

ಬೆಂಗಳೂರು, ಸೆ. 9: ‘ರಾಜ್ಯ ಬಿಜೆಪಿ ಸರಕಾರದ ಮೂರು ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲಿಕರಣದ ಕಾರ್ಯದ ಹಿನ್ನೆಲೆಯಲ್ಲಿ ‘ಜನಸ್ಪಂದನ' ಕಾರ್ಯಕ್ರಮವು ನಾಳೆ(ಸೆ.10) ದೊಡ್ಡಬಳ್ಳಾಪುರದಲ್ಲಿ ನಡೆಯಲಿದ್ದು, 3ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ' ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ದೊಡ್ಡಬಳ್ಳಾಪುರದ ದೇವನಹಳ್ಳಿ ರಸ್ತೆಯ ರಘುನಾಥಪುರದ ಎಲ್ ಆಂಡ್ ಟಿ ಮುಂಭಾಗದಲ್ಲಿ ‘ಜನಸ್ಪಂದನ' ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆ ಮತ್ತು ವೀಕ್ಷಣೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಎರಡು ವರ್ಷಗಳ ಕಾಲ ಸಿಎಂ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಸೇವೆ ಮಾಡಿದ್ದಾರೆ. ಅವರು ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಾನುಷ್ಠಾನ, ಕಾಮನ್‍ಮ್ಯಾನ್ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೈಗೊಂಡ ಹೊಸ ಕಾರ್ಯಕ್ರಮಗಳನ್ನು ಸೇರಿ 3 ವರ್ಷಗಳ ರಿಪೋರ್ಟ್ ಕಾರ್ಡನ್ನು ಜನರ ಮುಂದಿಡಲಾಗುವುದು ಎಂದು ಹೇಳಿದರು.

ಪ್ರಶ್ನಿಸುವವರಿಗೆ ‘ಜನಸ್ಪಂದನ' ಉತ್ತರ: ‘ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲವು ತಾಲೂಕುಗಳಿಂದ ಜನರು ಬರಲಿದ್ದು, ಬಿಜೆಪಿಯ ದೊಡ್ಡ ಜನಸಭೆ ಇದಾಗಲಿದೆ. ರಾಜ್ಯದ ಆರು ವಲಯಗಳಲ್ಲಿ ಇಂತಹ ಜನಸಭೆ ಏರ್ಪಡಿಸಲಾಗುವುದು. ಈ ಭಾಗದಲ್ಲಿ ಬಿಜೆಪಿಯ ಶಕ್ತಿಯನ್ನು ಪ್ರಶ್ನಿಸುವವರಿಗೆ ಇದು ಉತ್ತರ ನೀಡಲಿದೆ' ಎಂದು ಸುಧಾಕರ್ ಆಶಿಸಿದರು.

‘40 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಇಲ್ಲಿಯೇ ತಾತ್ಕಾಲಿಕ ಅಡುಗೆ ಮನೆಯನ್ನೂ ಮಾಡಲಾಗಿದೆ. ಅಲ್ಲಿಯೂ ದೊಡ್ಡದಾಗಿ ಉಪಾಹಾರ-ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡು ದೊಡ್ಡ ಕ್ಯಾಟರಿಂಗ್ ಸಂಸ್ಥೆಗಳಿಗೆ ಗುತ್ತಿಗೆ ಕೊಡಲಾಗಿದೆ' ಎಂದು ಅವರು ಮಾಹಿತಿ ನೀಡಿದರು.

ಪಲಾವ್, ಮೊಸರನ್ನ, ಬಾದುಶಾ: ‘ಮೂರು ಲಕ್ಷ ಜನರಿಗೆ ಊಟ ಸಿದ್ಧವಾಗುತ್ತಿದೆ. ವೆಜಿಟೇಬಲ್ ಪಲಾವ್, ಮೊಸರನ್ನ, ಬಾದುಶಾ ಸಿಹಿತಿಂಡಿ ನೀಡಲಾಗುತ್ತದೆ. ವಾಹನ ನಿಲುಗಡೆಗೆ 200 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ 12ಕಡೆ ಜಾಗಗಳನ್ನು ಗುರುತಿಸಲಾಗಿದೆ. ಸಂಚಾರ ದಟ್ಟಣೆ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷ ಸಭೆ ಮಾಡಿದ್ದು, ಮನವಿ ಮಾಡಿದ್ದೇವೆ' ಎಂದು ಅವರು ತಿಳಿಸಿದರು.

‘ಜನಸ್ಪಂದನ' ಒಂದು ಅರ್ಥಪೂರ್ಣ ಕಾರ್ಯಕ್ರಮ. ವಿಪಕ್ಷ ನಾಯಕ ಸಿದ್ದರಾಮಯ್ಯ ವೈಯಕ್ತಿಕ ಕಾರ್ಯಕ್ರಮ ಮಾಡಿಕೊಂಡರು. ನಾವು ಅದಕ್ಕೂ ಮೊದಲೇ ಯೋಜನೆ ಮಾಡಿದ್ದೆವು. ಕಾರ್ಯಕರ್ತನ ಹತ್ಯೆ ಕಾರಣಕ್ಕೆ ಕಾರ್ಯಕ್ರಮ ಮುಂದೂಡಿದ್ದೇವೆ. ಆದರೆ, ಅವರೇನು ಮಾಡಿದರು? ಯಾರು ಸತ್ತರೂ, ನೆರೆ ಬಂದರೂ ಕಾಂಗ್ರೆಸ್ ಪಕ್ಷದವರಿಗೆ ಏನೂ ಲೆಕ್ಕ ಇಲ್ಲ' ಎಂದು ಸುಧಾಕರ್ ತಿರುಗೇಟು ನೀಡಿದರು.

ಈ ವೇಳೆ ಸಚಿವರಾದ ಎಂ.ಟಿ.ಬಿ.ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ದಸರಾ ಆನೆಗಳಿಗೆ ತೂಕ ಪರೀಕ್ಷೆ: ಕ್ಯಾಪ್ಟನ್ 'ಅಭಿಮನ್ಯು' ತೂಕ ಎಷ್ಟು? 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News