ಮಲೆನಾಡಿನಲ್ಲಿ ಮುಂದುವರಿದ ಮಳೆ; ಕಳಸ-ಕೊಟ್ಟಿಗೆಹಾರ ರಸ್ತೆ ಮಧ್ಯೆ ಧರೆ ಕುಸಿತ

Update: 2022-09-09 14:25 GMT

ಚಿಕ್ಕಮಗಳೂರು, ಸೆ.9: ಜಿಲ್ಲೆಯ ಮಲೆನಾಡು ಭಾಗದಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಕಳಸ ತಾಲೂಕಿ ಹಿರೇಬೈಲು-ಕೊಟ್ಟಿಗೆಹಾರ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ಧರೆ ಕುಸಿದ ಪರಿಣಾಮ ಕೆಲ ಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಜಿಲ್ಲೆಯ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ಭಾಗದಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದ್ದರೇ, ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ತಂತುರು ಮಳೆಯಾಗಿದ್ದು, ಇಡೀ ದಿನ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಲೆನಾಡು ಭಾಗದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ ಭಾರೀ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಕಳಸ ತಾಲೂಕು ವ್ಯಾಪ್ತಿಯ ಹಿರೇಬೈಲು ಗ್ರಾಮದಲ್ಲಿ ಹೆದ್ದಾರಿ ಬದಿಯಲ್ಲಿ ಭೂಕುಸಿತ ಉಂಟಾಗಿ ರಸ್ತೆ ಮೇಲೆ ಭಾರೀ ಮಣ್ಣು ಬಿದ್ದ ಪರಿಣಾಮ ಸುಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಕಡಿತಗೊಂಡಿತ್ತು. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ರಸ್ತೆಯ ಎರಡೂ ಬದಿಯಲ್ಲಿ ನೂರಾರು ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಸ್ಥಳೀಯರು ಹೆದ್ದಾರಿ ಮೇಲಿದ್ದ ಮಣ್ಣು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಗುರುವಾರದಿಂದ ಮಳೆ ಕ್ಷ್ಯೀಣಗೊಂಡಿದ್ದರೂ ಅಲ್ಲಲ್ಲಿ ಮಳೆ ಅವಾಂತರ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News