ಬ್ರಿಟನ್ ರಾಣಿ ಎಲಿಝಬೆತ್ ಸ್ಮರಣಾರ್ಥ ಸೆ.11ರಂದು ಭಾರತದಲ್ಲಿ ಶೋಕಾಚರಣೆ

Update: 2022-09-09 16:46 GMT

ಹೊಸದಿಲ್ಲಿ,ಸೆ.9: ಗುರುವಾರ ಸ್ಕಾಟ್ಲಂಡ್‌ನಲ್ಲಿ ನಿಧನರಾದ ಬ್ರಿಟನ್ ರಾಣಿ ಎಲಿಝಬೆತ್ II (96) ಅವರ ಸ್ಮರಣಾರ್ಥ ಭಾರತವು ರವಿವಾರ ಒಂದು ದಿನದ ಶೋಕವನ್ನು ಆಚರಿಸಲಿದೆ.

ಬ್ರಿಟನ್‌ನ್ನು ಸುದೀರ್ಘ ಕಾಲ ಆಳಿದ್ದ ರಾಣಿಯವರ ಸಾವಿಗೆ ವಿಧ್ಯುಕ್ತ ಸಂತಾಪ ಸೂಚನೆಯಲ್ಲಿ ಇಡೀ ದೇಶವು ಪಾಲ್ಗೊಳ್ಳಲಿದೆ ಎಂದು ಗೃಹ ಸಚಿವಾಲಯವು ಹೇಳಿದೆ.

 ರಜಾದಿನಗಳನ್ನು ಕಳೆಯಲು ಸ್ಕಾಟ್ಲಂಡ್‌ನ ಬಾಲ್ಮೋರ್ ಅರಮನೆಗೆ ತೆರಳಿದ್ದ ರಾಣಿ ಎಲಿಝಬೆತ್ ಅಲ್ಪಕಾಲದ ಅಸ್ವಾಸ್ಥ್ಯದಿಂದ ಗುರುವಾರ ಮಧ್ಯಾಹ್ನ ನಿಧನರಾಗಿದ್ದರು.

ರಾಣಿ ಎಲಿಝಬೆತ್ ನಿಧನದ ಬಳಿಕ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಅವರು ಸ್ವಯಂಚಾಲಿತವಾಗಿ ಬ್ರಿಟನ್ನಿನ ನೂತನ ದೊರೆಯಾಗಿದ್ದಾರೆ. ಶನಿವಾರ ಈ ಬಗ್ಗೆ ವಿಧ್ಯುಕ್ತ ಘೋಷಣೆ ಹೊರಬೀಳಲಿದೆ. ಕಿಂಗ್ ಚಾರ್ಲ್ಸ್ II ಆಗಿ ಬ್ರಿಟನ್‌ನ್ನು ಆಳಲಿರುವ ಅವರು ಶುಕ್ರವಾರ ಸಂಜೆ ದೇಶವನ್ನುದ್ದೇಶಿಸಿ ಭಾಷಣವನ್ನು ಮಾಡಿದರು.

  ಗುರುವಾರ ತಡಸಂಜೆ ರಾಣಿಯವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿಯವರು,‘ರಾಣಿ ನಮ್ಮ ಕಾಲದ ಧೀಮಂತ ಮಹಿಳೆಯಾಗಿ ನೆನಪಿನಲ್ಲಿ ಉಳಿಯಲಿದ್ದಾರೆ.ಅವರು ತನ್ನ ದೇಶ ಮತ್ತು ಜನರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ನೀಡಿದ್ದರು. ಅವರು ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯನ್ನು ಮೈಗೂಡಿಸಿಕೊಂಡಿದ್ದರು. ಅವರ ನಿಧನದಿಂದ ನೋವುಂಟಾಗಿದೆ. ಈ ದುಃಖದ ಸಮಯದಲ್ಲಿ ನನ್ನ ಚಿಂತನೆಗಳು ಅವರ ಕುಟುಂಬ ಮತ್ತು ಬ್ರಿಟನ್ನಿನ ಜನರೊಂದಿಗೆ ಇವೆ ’ ಎಂದು ಮೋದಿ ಟ್ವೀಟಿಸಿದ್ದಾರೆ.

 2015 ಮತ್ತು 2018ರಲ್ಲಿ ಬ್ರಿಟನ್ ಪ್ರವಾಸದ ಸಂದರ್ಭಗಳಲ್ಲಿ ರಾಣಿಯವರೊಂದಿಗಿನ ಸ್ಮರಣೀಯ ಭೇಟಿಗಳನ್ನು ನೆನಪಿಸಿಕೊಂಡಿರುವ ಮೋದಿ,‘ಅವರ ಆತ್ಮೀಯತೆ ಮತ್ತು ಕಕ್ಕುಲತೆಯನ್ನು ನಾನೆಂದಿಗೂ ಮರೆಯುವುದಿಲ್ಲ. ಅವರೊಂದಿಗಿನ ಭೇಟಿಯ ಒಂದು ಸಂದರ್ಭದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರು ತನ್ನ ಮದುವೆಗೆ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ನನಗೆ ತೋರಿಸಿದ್ದರು. ಅವರ ಆ ನಡೆಯನ್ನು ನಾನೆಂದಿಗೂ ಮರೆಯುವುದಿಲ್ಲ’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News