ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿದ ಕರ್ಲೀಸ್ ರೆಸ್ಟಾರಂಟ್ ಧ್ವಂಸಕ್ಕೆ ಸುಪ್ರೀಂ ತಡೆ

Update: 2022-09-09 17:34 GMT

ಹೊಸದಿಲ್ಲಿ,ಸೆ.9: ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಸಾವಿನೊಂದಿಗೆ ಗುರುತಿಸಿಕೊಂಡಿರುವ ಗೋವಾದ ಅಂಜುನಾದಲ್ಲಿನ ಕರ್ಲೀಸ್ ರೆಸ್ಟಾರಂಟ್‌ನ ನೆಲಸಮ ಕಾರ್ಯಾಚರಣೆಯನ್ನು ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಆರಂಭಿಸಿದ್ದರಾದರೂ,ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ ಎಂದು ಮಾಲಿಕ ತಿಳಿಸಿದ ಬಳಿಕ ಅರ್ಧದಲ್ಲಿಯೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜ್ಯ ಸರಕಾರವು ವಿವಾದಾತ್ಮಕ್ ಕರ್ಲೀಸ್‌ನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಬೆಳಿಗ್ಗೆ 7:30ಕ್ಕೆ ಆರಂಭಿಸಿತ್ತು ಮತ್ತು ಪೂರ್ವಾಹ್ನ 11:30ಕ್ಕೆ ಅದನ್ನು ನಿಲ್ಲಿಸಲಾಯಿತು.

ಫೋಗಟ್ ತನ್ನ ಸಾವಿಗೆ ಕೆಲವೇ ಗಂಟೆಗಳ ಮೊದಲು ಈ ರೆಸ್ಟಾರಂಟ್‌ನಲ್ಲಿ ಪಾರ್ಟಿ ಮಾಡಿದ್ದರು ಎನ್ನುವುದು ಬೆಳಕಿಗೆ ಬಂದ ಬಳಿಕ ಕರ್ಲೀಸ್ ಸುದ್ದಿಗೆ ಗ್ರಾಸವಾಗಿತ್ತು.

ಫೋಗಟ್ ಸಾವಿನ ಪ್ರಕರಣದಲ್ಲಿ ಬಂಧಿತ ಐವರಲ್ಲಿ ರೆಸ್ಟಾರಂಟ್ ಮಾಲಿಕ ಎಡ್ವಿನ್ ನ್ಯೂನ್ಸ್ ಕೂಡ ಒಬ್ಬರಾಗಿದ್ದು,ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ.

ರೆಸ್ಟಾರಂಟ್‌ನ ಸಹಮಾಲಕಿ ಲಿನೆಟ್ ನ್ಯೂನ್ಸ್ ಪರ ವಕೀಲ ಗಜಾನನ ಕೋರಗಾಂವಕರ್ ಅವರು,ನೆಲಸಮ ಕಾರ್ಯಾಚರಣೆಗೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ ಎಂದು ಸ್ಥಳದಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ವಾರ ನಡೆಯಲಿರುವ ಮುಂದಿನ ವಿಚಾರಣೆಯವರೆಗೆ ಈ ಸ್ಥಳದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ನಿಷೇಧಿಸಿದೆ ಎಂದರು.

ಗೋವಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ 2016ರ ನೆಲಸಮ ಆದೇಶದ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ದಿಂದ ಪರಿಹಾರವನ್ನು ಪಡೆದುಕೊಳ್ಳಲು ನ್ಯೂನ್ಸ್ ವಿಫಲಗೊಂಡ ಬಳಿಕ ರೆಸ್ಟಾರಂಟ್ ವಿರುದ್ಧ ಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಸೆ.6ರಂದು ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾ.ಆದರ್ಶಕುಮಾರ ಗೋಯಲ್ ಅಧ್ಯಕ್ಷತೆಯ ಎನ್‌ಜಿಟಿ ಪೀಠವು,ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿತ್ತು ಮತ್ತು ನ್ಯೂನ್ಸ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತ್ತು.

ಆ.23ರಂದು ಸಾವಿಗೆ ಮುನ್ನ ಫೋಗಟ್‌ಗೆ ಕರ್ಲೀಸ್ ರೆಸ್ಟಾರಂಟ್‌ನಲ್ಲಿ ಮಾದಕ ದ್ರವ್ಯ ಬೆರೆಸಿದ್ದ ಪಾನೀಯವನ್ನು ನೀಡಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News