'ಕೇರಳದ ತಲಶ್ಶೇರಿಯಿಂದ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗಕ್ಕೆ ಅನುಮತಿ ನೀಡದಿರಲು ಸರಕಾರದ ತೀರ್ಮಾನ'

Update: 2022-09-09 17:46 GMT

ಬೆಂಗಳೂರು, ಸೆ. 9: ‘ಕೇರಳ ರಾಜ್ಯದ ತಲಶ್ಶೇರಿಯಿಂದ ಚಾಮರಾಜನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಗೆ ಕರ್ನಾಟಕ ಸರಕಾರ ಅನುಮತಿ ನೀಡದಿರಲು ತೀರ್ಮಾನಿಸಿದೆ' ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಉದ್ದೇಶಿತ ಮಾರ್ಗದಲ್ಲಿ ನಾಗರಹೊಳೆ ಮತ್ತು ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದ 22 ಕಿಮೀ ಉದ್ದದಷ್ಟು ರೈಲ್ವೆ ಸುರಂಗ ಮಾರ್ಗವನ್ನು ರೂಪಿಸಲು ಕೇರಳ ಸರಕಾರ ಯೋಜನೆ ರೂಪಿಸಿ ಅನುಮತಿ ನೀಡಿದೆ. ಆದರೆ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೃಹತ್ ಗಾತ್ರದ ಸುರಂಗ ಮಾರ್ಗ ನಿರ್ಮಿಸುವುದು ಸುರಕ್ಷಿತವಲ್ಲ. ಒಂದು ವೇಳೆ ಈ ಮಾರ್ಗದ ನಿರ್ಮಾಣಕ್ಕೆ ಅನುಮತಿ ನೀಡಿದರೆ ಅರಣ್ಯ ಪ್ರದೇಶ, ವನ್ಯಜೀವಿಗಳಿಗೆ ಸಂಚಾರಕ್ಕೆ ಅಡಚಣೆಯಾಗುತ್ತದೆ' ಎಂದು ಎಚ್ಚರಿಸಿದರು.

‘ಈ ಸುರಂಗ ನಿರ್ಮಿಸಿದರೆ 60ರಿಂದ 70 ಕಿಲೋಮೀಟರುಗಳಷ್ಟು ಅಂತರ ಕಡಿಮೆಯಾಗಲಿದೆ ಎಂಬುದು ಕೇರಳ ಸರಕಾರದ ವಾದ. ಆದರೆ, ಇಂತಹ ಸಂರಕ್ಷಿತ ಅರಣ್ಯ ಪ್ರದೇಶವನ್ನು ಕಳೆದುಕೊಂಡರೆ ಪುನಃ ಅದನ್ನು ಬೆಳೆಸುವುದು ಅಸಾಧ್ಯ. ಹೀಗಾಗಿ ಕೇರಳ ರಾಜ್ಯ ಸರಕಾರದ ಪ್ರಸ್ತಾವನೆಗೆ ಅಂಗೀಕಾರ ನೀಡದಿರಲು ಕರ್ನಾಟಕ ನಿರ್ಧರಿಸಿದೆ' ಎಂದು ಸೋಮಣ್ಣ ವಿವರಣೆ ನೀಡಿದರು.

ಸುರಂಗ ಮಾರ್ಗ ನಿರ್ಮಾಣ: ‘ಕರ್ನಾಟಕದ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದೆ. ಕನಕಪುರದಿಂದ ತಮಿಳುನಾಡಿನ ಸೇಲಂಗೆ ಹೊಸ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆ ಸಂಬಂಧ ಸರ್ವೇ ಕಾರ್ಯ ಆರಂಭಗೊಂಡಿದೆ. ಕನಕಪುರ-ಮಳವಳ್ಳಿ-ಕೊಳ್ಳೇಗಾಲ-ಯಳಂದೂರು-ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ' ಎಂದು ಸೋಮಣ್ಣ ತಿಳಿಸಿದರು.

‘ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ತಮಿಳುನಾಡಿನ ಈರೋಡ್ ನಡುವೆ ಅರಣ್ಯ ಪ್ರದೇಶ ಇರುವುದರಿಂದ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ನೆಲದಡಿ ಸುರಂಗ ಮಾರ್ಗದ ಮೂಲಕ 9 ಕಿ.ಮೀ.ಗಳಷ್ಟು ದೂರ ರೈಲು ಸಂಚರಿಸಲಿದೆ. ಕಾಡು ಉಳಿಸುವುದು ಮತ್ತು ಪರಿಸರಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಈ ಸುರಂಗ ನಿರ್ಮಾಣವಾಗಲಿದೆ' ಎಂದು ಸೋಮಣ್ಣ ಹೇಳಿದರು.

--------------------------------------

‘ರೈಲ್ವೆ ಮಾರ್ಗಗಳಲ್ಲಿನ ಕೆಳ ಸೇತುವೆಗಳಲ್ಲಿ ಮಳೆ ಮತ್ತು ಪ್ರವಾಹದ ಸಂದರ್ಭದಲ್ಲ್ಲಿ ನೀರು ತುಂಬಿಕೊಂಡುಜಲಾವೃತವಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಅವುಗಳನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ'

-ವಿ.ಸೋಮಣ್ಣ ಮೂಲಸೌಕರ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News