ಶಿರಾ ನಗರಸಭೆ ಜೆಡಿಎಸ್ ಸದಸ್ಯನ ಸದಸ್ಯತ್ವ ಅಸಿಂಧು

Update: 2022-09-09 18:11 GMT

ತುಮಕೂರು: ಚುನಾವಣೆ ವೇಳೆ ನಿಯಮಾವಳಿಗಳ ಅಡಿ ಚುನಾವಣಾ ಆಯೋಗಕ್ಕೆ ಸ್ಪಷ್ಟ ಮಾಹಿತಿಯನ್ನು ನೀಡದ ಕಾರಣಕ್ಕೆ ಅಭ್ಯರ್ಥಿ ಒಬ್ಬರ ಆಯ್ಕೆಯನ್ನು ಅಸಿಂಧುಗೊಳಿಸಿ ಶಿರಾ ನ್ಯಾಯಾಲಯ ಇತ್ತೀಚೆಗೆ ಆದೇಶ ಹೊರಡಿಸಿದೆ.

2021 ರಲ್ಲಿ ನಡೆದ ಶಿರಾ ನಗರಸಭೆ ಚುನಾವಣೆ ವೇಳೆ 9ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿ ರವಿಶಂಕರ್ ಜನಪ್ರತಿನಿಧಿಯಾಗಿ ಆಯ್ಕೆಗೊಂಡಿದ್ದರು. 

ಬೇರೆ ವಾರ್ಡಿನ ಮತದಾರರನ್ನು ತಮ್ಮ ರಾಜಕೀಯ ಪ್ರಾಬಲ್ಯವನ್ನು ಬಳಸಿ ಒಂಬತ್ತನೇ ವಾರ್ಡಿಗೆ  ಅಕ್ರಮವಾಗಿ ವರ್ಗಾಯಿಸಿದ್ದಾರೆ  ಹಾಗೂ ನಾಮಪತ್ರ ಸಲ್ಲಿಕೆ ವೇಳೆ ಕೆಲವೊಂದು ಮಾಹಿತಿಗಳನ್ನು ಮುಚ್ಚಿಟ್ಟು ಅಕ್ರಮವಾಗಿ ಆಯ್ಕೆಗೊಂಡಿದ್ದಾರೆ ಅವರನ್ನು ಅನೂರ್ಜಿತಗೊಳಿಸಬೇಕೆಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಶಿರಾ ಜೆ.ಎಂ.ಎಫ್. ಸಿ. ಯ ಹಿರಿಯ ಸಿವಿಲ್ ನ್ಯಾಯಾಧೀಶೆ ಗೀತಾಂಜಲಿ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧು ಗೊಳಿಸಿ ಆದೇಶ ಹೊರಡಿಸಿದ್ದಾರೆ. ಚುನಾವಣೆ ವೇಳೆ ಸಲ್ಲಿಸಲಾಗಿದ್ದ ಪ್ರಮಾಣ ಪತ್ರದಲ್ಲಿ ತಮ್ಮ ಮೇಲಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಮುಚ್ಚಿಡಲಾಗಿತ್ತು. ಆಸ್ತಿ ವಿವರಗಳನ್ನು ಸರಿಯಾಗಿ ನಮೂದಿಸದೆ ಇರುವುದು, ಆದಾಯದ ಮಾಹಿತಿ ಸೇರಿದಂತೆ ಹಲವು ಅಂಶಗಳು ತಾಳೆಯಾಗದೆ ಇರುವುದೇ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸಲು ಕಾರಣಗಳಾಗಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News