ಸೆ.12ಕ್ಕೆ ರೈತರಿಂದ ವಿಧಾನಸೌಧ ಮುತ್ತಿಗೆ

Update: 2022-09-09 18:34 GMT

ಬೆಂಗಳೂರು, ಸೆ.9: ರಾಜ್ಯ ಬಿಜೆಪಿ ಸರಕಾರವು ದೇಶದಲ್ಲಿ ಯಾವ ರಾಜ್ಯದಲ್ಲೂ ಇರದ ವಿವಾದಿತ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಅವನ್ನು ಹಿಂಪಡೆಯದಿದ್ದರೆ, ಸೆ.12ರಂದು ವಿಧಾನಸೌಧ ಮುತ್ತಿಗೆ ಮಾಡಲಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. 

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಕೃಷಿ ಮಾರುಕಟ್ಟೆಯನ್ನು ರೈತರಿಂದ ಕಸಿದು ಕಂಪನಿಗಳಿಗೆ ನೀಡಲು ಮತ್ತು ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡು, ಹಣವಂತರು ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಕಂದಾಯ ಕಾಯ್ದೆ 1961 ಮತ್ತು 1964 ಕಾನೂನಿಗೆ ತಿದ್ದುಪಡಿ ಮಾಡಲಾಗಿದೆ. ಇದಲ್ಲದೆ ಹೈನುಗಾರಿಕೆ ರೈತರ ಕೈತಪ್ಪಿಸಿ ಬಂಡವಾಳಶಾಹಿಗಳಿಗೆ ನೀಡಲು ಅನೇಕ ತಿದ್ದುಪಡಿ ಮಾಡಿದ್ದಾರೆ. ಗೋಶಾಲೆ ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಅವರಿಗೆ ಶೇ.50 ಸಹಾಯ ಮಾಡುವ ನೀತಿ ಜಾರಿಗೆ ತಂದು, ವಿದೇಶಿ ಹಾಲು ಮಾರುಕಟ್ಟೆ ತೆರೆಯಲು ಯೋಚಿಸುತ್ತಿದ್ದಾರೆ. ಈ ಹೈನುಗಾರಿಕೆ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರು.

ಇದಲ್ಲದೆ ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಫಲವತ್ತಾದ ಭೂಮಿಯನ್ನು ಮುಟ್ಟುಗೋಲು ಹಾಕುವುದನ್ನು ಸಂಪೂರ್ಣವಾಗಿ ಕೈಬಿಡಬೇಕು. ರೈತರು ಹಂಗಾಮಿಯಾಗಿ ಕಂದಾಯ ಮತ್ತು ಅರಣ್ಯ ಭೂಮಿಯನ್ನು ಕೃಷಿ ಮಾಡುತ್ತಿರುವ ಭೂಮಿಯನ್ನು ಈ ಕೂಡಲೇ ಮಂಜೂರಾತಿ ಮಾಡಬೇಕು. ರೈತರ ಒಕ್ಕಲಿಬ್ಬಿಸುವುದನ್ನು ತಕ್ಷಣವೇ ಕೈಬಿಡಬೇಕು. ಈ ಎಲ್ಲಾ ಕಾರಣಗಳಿಗೆ ರೈತರು ಸರಕಾರವನ್ನು ಎಚ್ಚರಿಸುವಂತೆ ಕರೆ ನೀಡಿದರು. ಗೋಷ್ಠಿಯಲ್ಲಿ ಭಕ್ತರಹಳ್ಳಿ ಬೈರೇಗೌಡ, ಸುರೇಶ್ ಹೊಸ್ಕೂರು, ರವಿಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News