ಸಂಸದ ತೇಜಸ್ವಿ ಸೂರ್ಯಗೆ ‘ಮಸಾಲೆ ದೋಸೆ' ರವಾನಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಸೆ. 10: ‘ಬೆಂಗಳೂರು ನಗರದ ಜನತೆ ಮಳೆ ಮತ್ತು ಪ್ರವಾಹದಿಂದ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಮಸಾಲೆ ದೋಸೆ ತಿಂದು ಬೇಜವಾಬ್ದಾರಿ ಪ್ರದರ್ಶಿಸಿದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪ್ರಚಾರ ಸಮಿತಿ ‘ಉಚಿತವಾಗಿ ಮಸಾಲೆ ದೋಸೆ' ಕಳುಹಿಸಿ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.
ಶನಿವಾರ ಇಲ್ಲಿನ ಆನಂದ ರಾವ್ ವೃತ್ತದ ಬಳಿಕ ಕೆಪಿಸಿಸಿ ಕಚೇರಿ ಬಳಿ ಹತ್ತಾರು ಮಸಾಲೆ ದೋಸೆಗಳನ್ನು ತೇಜಸ್ವಿ ಸೂರ್ಯ ಅವರ ಭಾವಚಿತ್ರದ ಮುಂದಿಟ್ಟು ಪ್ರತಿಭಟನೆ ನಡೆಸಿದರು. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ‘ಇನ್ಸ್ಟಾಗ್ರಾಂನಲ್ಲಿ ಮಸಾಲೆ ದೋಸೆ ಫೋಟೋ ನೋಡಿ ಟೆಂಪ್ಟ್ ಆಗಿ ದೋಸೆ ತಿನ್ನಲು ಬಂದೆ, ಬಹಳ ಚೆನ್ನಾಗಿದೆ. ನೀವು ಬನ್ನಿ ದೋಸೆ ಸವಿಯಿರಿ' ಎಂದು ಜನರಿಗೆ ಆಹ್ವಾನ ನೀಡಿದ ಸಂಸದರ ನಡವಳಿಕೆಯನ್ನು ಖಂಡಿಸಿದರು.
ಚುನಾಯಿತ ಪ್ರತಿನಿಧಿಯು ಆಗಿರುವ ತೇಜಸ್ವಿ ಸೂರ್ಯಗೆ ಜನರ ಸಮಸ್ಯೆಗೆ ಕಿಂಚಿತ್ತೂ ಕಾಳಜಿ ಇಲ್ಲ. ಜನರು ಮಳೆ ಪ್ರವಾಹದಿಂದ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಆದರೆ, ಸಂಕಷ್ಟಕ್ಕೆ ಸ್ಪಂದಿಸಿ ಹಾಗೂ ಸಮಸ್ಯೆಯನ್ನು ಆಲಿಸದ ಬೇಜಬ್ದಾರಿಯಾಗಿ ವರ್ತಿಸಿದ್ದು ಅಲ್ಲದೆ, ಅದನ್ನು ಸಮರ್ಥನೆ ಬೇರೆ ನೀಡುತ್ತಿರುವುದು ನಿಜಕ್ಕೂ ನಾಚಿಕೇಗೇಡಿನ ಸಂಗತಿ ಎಂದು ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಸಾಲೆ ದೋಸೆಯನ್ನು ಸಂಸದ ತೇಜಸ್ವಿ ಸೂರ್ಯ ಅವರಿಗೆ ರವಾನೆ ಮಾಡಲಾಯಿತು. ಪ್ರತಿಭಟನೆ ನೇತೃತ್ವವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಪಕ್ಷದ ಮುಖಂಡರಾದ ಸುಧಾಕರ್, ಮಂಜುನಾಥ್, ಪ್ರಕಾಶ್, ತೇಜಸ್ ಕುಮಾರ್, ವೆಂಕಟೇಶ್, ಅನಿಲ್, ಪ್ರಶಾಂತ್, ಚೇತನ್, ಪುಟ್ಟರಾಜು, ಸುಪ್ರಜ್ ಸೇರಿದಂತೆ ಇನ್ನಿತರರು ವಹಿಸಿದ್ದರು.
ಇದನ್ನೂ ಓದಿ: ತಮ್ಮದೇ ಸರ್ಕಾರದ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ಸತೀಶ್ ರೆಡ್ಡಿ