ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯ: BJP ಸರ್ಕಾರದ 'ಜನಸ್ಪಂದನ' ವಿರುದ್ಧ ಪ್ರತಿಭಟನೆ

Update: 2022-09-10 12:08 GMT

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಸರ್ಕಾರವು ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿರುವ ಜನಸ್ಪಂದನ ಸಮಾವೇಶದ ವಿರುದ್ಧ ಪ್ರತಿಭಟನೆ ನಡೆಸಿದ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  

'ಆಗಸ್ಟ್ 15 ರಂದು ದೇವನಹಳ್ಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ಒಂದು ತಿಂಗಳ ಒಳಗಾಗಿ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದರು. ಎಲ್ಲಾ ಮಾನದಂಡಗಳ ಅನ್ವಯ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಮಾಡಲು ಅರ್ಹತೆ ಹೊಂದಿದೆ.  ಈ ಕುರಿತು ನಾವು ಮುಖ್ಯಮಂತ್ರಿಗಳಿಗೆ ಮನವಿ ಕೊಡಲು ನಿರ್ಧರಿಸಿದ್ದೆವು. ಆದರೆ ಉಸ್ತುವಾರಿ ಸಚಿವರಾದ ಸುಧಾಕರ್‌ರವರು ಪೂರ್ವಗ್ರಹ ಪೀಡಿತರಾಗಿದ್ದಾರೆ. ಅವರು ಸರ್ಕಾರದ ಪ್ರತಿನಿಧಿಯಾಗಿ ವರ್ತಿಸುತ್ತಿಲ್ಲ. ಹಾಗಾಗಿ ನಮಗೆ ಸಿಎಂರನ್ನು ಭೇಟಿ ಮಾಡಲು ಅನುಮತಿ ನೀಡುತ್ತಿಲ್ಲ. ನಮ್ಮ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಳಿಗ್ಗೆ ನಗರದ ಕನ್ನಡ ಜಾಗೃತ ಪರಿಷತ್ ಬಳಿ ಸಭೆ ಸೇರಿ ಜಾಥದಲ್ಲಿ ತೆರಳಿ ಜನಸ್ಪಂದನ ನಡೆಯುವ ಸ್ಥಳದ ಕಡೆಗೆ ಹೊರಟಿದ್ದವರನ್ನು ಪೊಲೀಸರು ತಡೆದಿದ್ದರು. ಬಳಿಕ ಕಪ್ಪು ಪಟ್ಟಿ ಧರಿಸಿ ಕನ್ನಡ ಜಾಗೃತ ಭವನದ ಮುಂದೆ ಪ್ರತಿಭಟನೆ ಮಾಡುತ್ತಿದ್ದ 150 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 

ರಾಜ್ಯ ಬಿಜೆಪಿ ಸರಕಾರದ ಮೂರು ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲಿಕರಣದ ಕಾರ್ಯದ ಹಿನ್ನೆಲೆಯಲ್ಲಿ   ರಾಜ್ಯ ಬಿಜೆಪಿ ಘಟಕ ಆಯೋಜಿಸರುವ  ‘ಜನಸ್ಪಂದನ' ಸಮಾವೇಶವು ದೊಡ್ಡಬಳ್ಳಾಪುರದ ದೇವನಹಳ್ಳಿ ರಸ್ತೆಯ ರಘುನಾಥಪುರದ ಎಲ್ ಆಂಡ್ ಟಿ ಮುಂಭಾಗದಲ್ಲಿ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News