ತನಿಖೆ ಎದುರಿಸಲು ಸಿದ್ಧ, ಬಿಜೆಪಿಯವರ ಹುಸಿ ಬೆದರಿಕೆಗೆ ನಾವು ಹೆದರಲ್ಲ: ಸಿದ್ದರಾಮಯ್ಯ

Update: 2022-09-10 11:51 GMT

ಬೆಂಗಳೂರು, ಸೆ. 10: ‘ನಮ್ಮ ಕಾಲದ ಹಗರಣಗಳನ್ನು ಬಯಲುಗೊಳಿಸುತ್ತಾರೆಂದು ಬಿಜೆಪಿ ಬ್ಲಾಕ್‍ಮೇಲ್ ಮಾಡುತ್ತಿದೆ. ಇವರ ಹುಸಿ ಬೆದರಿಕೆಗೆ ನಾವು ಹೆದರುವುದಿಲ್ಲ. ಹದಿನಾರು ವರ್ಷಗಳಲ್ಲಿ ಹನ್ನೊಂದು ವರ್ಷ ಇವರೇ ಅಧಿಕಾರದಲ್ಲಿದದ್ದು. ಧೈರ್ಯ ಇದ್ದರೆ ಅದನ್ನೂ ಸೇರಿಸಿ ತನಿಖೆ ಮಾಡಲಿ. ನಾವು ತನಿಖೆ ಎದುರಿಸಲು ಸಿದ್ಧರಿದ್ದೇವೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಬಸವರಾಜ ಬೊಮ್ಮಾಯಿ ಸರಕಾರಕ್ಕೆ ವರ್ಷ ತುಂಬಿದ್ದಕ್ಕಾಗಿ ಜನಸ್ಪಂದನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ ‘ಜನಸ್ಪಂದನ' ಅಲ್ಲ ‘ಜನ ಮರ್ದನ' ಎಂದು ಹೆಸರಿಡಬೇಕಾಗಿತ್ತು. ಮೂರು ವರ್ಷಗಳ ಬಿಜೆಪಿ ಸರಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸುಳ್ಳು ಹೇಳಿಕೆಗಳಿಂದಾಗಿ ಜನ ನಲುಗಿಹೋಗಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಸ್ಪಂದನ ಮಾಡಲು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ವಿಪಕ್ಷಗಳು ಇವರನ್ನು ಪ್ರಶ್ನೆ ಮಾಡಿದರೆ ಸಿಬಿಐ, ಈಡಿ, ಐಟಿ ದಾಳಿ ನಡೆಸಿ ಬೆದರಿಸುತ್ತಾರೆ. ನಾಗರಿಕರು ಪ್ರಶ್ನೆ ಮಾಡಿದರೆ ಸುಳ್ಳು ಕೇಸ್‍ಗಳನ್ನು ಹಾಕಿ ಜೈಲಿಗೆ ಹಾಕುತ್ತಾರೆ. ಜನ ಸ್ಪಂದಿಸುವುದಾದರೂ ಹೇಗೆ? ಜನತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಟ್ಟರೆ ಜನಾಕ್ರೋಶದಲ್ಲಿ ಇವರ ಜನಸ್ಪಂದನ ಕೊಚ್ಚಿಹೋಗಬಹುದು. ಬಿಜೆಪಿಯ ಮೂರು ವರ್ಷಗಳ ಸಾಧನೆ ಎಂದರೆ ಸುಳ್ಳು, ಭ್ರಷ್ಟಾಚಾರ ಮತ್ತು ದುರಾಡಳಿತ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಎಸಿಬಿಗೆ ಭ್ರಷ್ಟಾಚಾರವೇ ದಂಧೆಯಾಗಿದೆ, ಸ್ವಯಂ ಸಿಸಿಬಿಯೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆ, ಅದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ. ಎಸಿಬಿ ಕಚೇರಿಯೇ ಕಲೆಕ್ಷನ್ ಸೆಂಟರ್‍ಗಳಾಗಿವೆ' ಎಂದು ಹೇಳಿದ್ದು ನಾನಲ್ಲ, ಹೈಕೋರ್ಟ್ ನ್ಯಾಯಾಧೀಶರು' ಎಂದು ಉಲ್ಲೇಖಿಸಿರುವ ಸಿದ್ದರಾಮಯ್ಯ, ‘ಇದರ ಜೊತೆ ಕ್ರಿಪ್ಟೋ ಕರೆನ್ಸಿಯ ಹಗರಣ, ಪಿಎಸ್ಸೈ ನೇಮಕದಲ್ಲಿ ಲಂಚಾವತಾರ, ಶಿಕ್ಷಣ ಮತ್ತು ವಿದ್ಯುತ್ ಇಲಾಖೆಯಲ್ಲಿನ 'ಭ್ರಷ್ಟಾಚಾರ' ಎಂದು ಟೀಕಿಸಿದ್ದಾರೆ.

‘ಕಮಿಷನ್ ಸಂಗ್ರಹಿಸಲು ಅಧಿಕಾರಿಗಳನ್ನೇ ಪೀಡಿಸಿದರೆ ಅವರಿಗಾದರೂ ಸಚಿವರ ಮೇಲೆ ಏನು ಗೌರವ ಉಳಿದೀತು? ಸಚಿವರ ಮಾತಿಗೆ ಅಧಿಕಾರಿಗಳು ಏನು ಬೆಲೆ ಕೊಡಬಹುದು. ಒಟ್ಟಾರೆಯಾಗಿ ಇಡೀ ಆಡಳಿತ ಯಂತ್ರವೇ ಕುಸಿದು ಹೋಗಿದೆ. ಆದಷ್ಟು ಬೇಗ ಚುನಾವಣೆ ನಡೆದು ಈ ಸರಕಾರ ತೊಲಗಿ ಹೋದರೆ ಸಾಕು ಎಂದು ಜನ ಕಾಯುತ್ತಿದ್ದಾರೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News