ಸಿಎಂ ಬೊಮ್ಮಾಯಿ ಕಾರ್ಯವೈಖರಿಯನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದಾರೆ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಸೆ.10: 'ರಾಜ್ಯದಲ್ಲಿ ಬಿಜೆಪಿ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ನಮ್ಮ ಸರಕಾರಗಳ ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಜನತೆ ಒಪ್ಪಿಕೊಂಡಿದ್ದಾರೆ. ರಾಜ್ಯಕ್ಕೆ ಡಬಲ್ ಇಂಜಿನ್ ಸರಕಾರ ಬೇಕಾ ಅಥವಾ ಡಬಲ್ ಸ್ಟೇರಿಂಗ್ ಸರಕಾರ ಬೇಕಾ ಎಂಬುದನ್ನು ಜನರೇ ತೀರ್ಮಾನ ಮಾಡಲಿದ್ದಾರೆ' ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆಯ ‘ಜನಸ್ಪಂದನ’ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಮೊದಲು ನಾವು ಈ ಕಾರ್ಯಕ್ರಮಕ್ಕೆ ‘ಜನೋತ್ಸವ’ ಎಂದು ಹೆಸರು ಇಟ್ಟಿದ್ದೆವು, ನಂತರ ಅದನ್ನು ‘ಜನಸ್ಪಂದನ’ ಎಂದು ಬದಲಾಯಿಸಿದ್ದೇವೆ. ಜನರಿಂದ ಆಯ್ಕೆಯಾಗಿರುವ ನಾವು ಜನರ ನಡುವೆ ಉತ್ಸವ ಮಾಡುತ್ತಿದ್ದೇವೆ. ಇದೇ ನಿಜವಾದ ಪ್ರಜಾಪ್ರಭುತ್ವ. ನಮ್ಮನ್ನು ಟೀಕಿಸುವ ಕಾಂಗ್ರೆಸ್‍ನವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾವು ಮಾಡುತ್ತಿರುವುದು ಒಬ್ಬ ವ್ಯಕ್ತಿಯ ಉತ್ಸವವಲ್ಲ. ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರಕಾರ ಮಾಡಿರುವ ಸೇವೆಯ ಅನಾವರಣ. ನಾವು ಮಾಡಿರುವ ಕೆಲಸವನ್ನು ಜನರ ಮುಂದಿಡುವ ಕೆಲಸ ಮಾಡುತ್ತಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆಯನ್ನು ಬೊಮ್ಮಾಯಿ ಸರಕಾರ ಜಾರಿಗೊಳಿಸಿದೆ. ರಾಜ್ಯದಲ್ಲಿ 12 ಕೋಟಿ ಕೋವಿಡ್ ಲಸಿಕೆ ಕೊಡಲಾಗಿದೆ. ವಿವಿಧ ಯೋಜನೆಗಳ ಮೂಲಕ ಮಾಡಿದ ಸಾಧನೆಯನ್ನು ಇಲ್ಲಿ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದರು.
ನಮ್ಮದು ಕಾರ್ಯಕರ್ತರ ಪಕ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಸೂತಕದ ಮನೆಯಲ್ಲಿ ನಾವು ಕಾರ್ಯಕ್ರಮ ಮಾಡಲಿಲ್ಲ. ಅನೇಕರು ಕಾರ್ಯಕ್ರಮವನ್ನು ಮಾಡುವಂತೆ ಸಲಹೆ ನೀಡಿದರು. ಆದರೆ, ಕಾರ್ಯಕರ್ತರ ದುಃಖದಲ್ಲಿ ಭಾಗಿಯಾಗಿ, ಅವರಲ್ಲಿ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡಿದೆವು ಎಂದು ಸುಧಾಕರ್ ತಿಳಿಸಿದರು.
ಎತ್ತಿನಹೊಳೆ ಯೋಜನೆ: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವ ಎತ್ತಿನಹೊಳೆ ಯೋಜನೆಯನ್ನು 2012ರಲ್ಲಿ ಡಿ.ವಿ.ಸದಾನಂದಗೌಡ ನೇತೃತ್ವದ ಸರಕಾರದಲ್ಲಿ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ರೂಪಿಸಲಾಯಿತು. ಈ ಯೋಜನೆಯ ಸಂಪೂರ್ಣ ಶ್ರೇಯಸ್ಸು ನಮ್ಮ ಪಕ್ಷದ ನಾಯಕರಿಗೆ ಸಲ್ಲಬೇಕು. ಆದಷ್ಟು ಬೇಗ ಈ ಯೋಜನೆ ಕಾಮಗಾರಿ ಮುಗಿಸಿ ಜನರಿಗೆ ನೀರು ಕೊಡುವಂತ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ ಎಂದು ಅವರು ತಿಳಿಸಿದರು.