ರೈತರ ಕಲ್ಯಾಣಕ್ಕಾಗಿ ನಾವು ಕೊಟ್ಟಷ್ಟು ಸೌಲಭ್ಯ ಬೇರೆ ಯಾರೂ ನೀಡಿಲ್ಲ: ಬಿ.ಎಸ್.ಯಡಿಯೂರಪ್ಪ

Update: 2022-09-10 13:09 GMT

ಬೆಂಗಳೂರು, ಸೆ.10: ರಾಜ್ಯ ಹಾಗೂ ದೇಶದಲ್ಲಿನ ರೈತರ ಕಲ್ಯಾಣಕ್ಕಾಗಿ ಬಿಜೆಪಿ ಸರಕಾರಗಳು ಕೊಟ್ಟಷ್ಟು ಸೌಲಭ್ಯಗಳನ್ನು ಬೇರೆ ಯಾವ ಪಕ್ಷದ ಸರಕಾರಗಳು ನೀಡಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ರೈತರು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆಯ ‘ಜನಸ್ಪಂದನ’ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರದ ‘ಕಿಸಾನ್ ಸಮ್ಮಾನ್’ ಯೋಜನೆಯಡಿ ರೈತರಿಗೆ 6 ಸಾವಿರ ರೂ.ಗಳೊಂದಿಗೆ ರಾಜ್ಯ ಸರಕಾರದ ಪಾಲು 4 ಸಾವಿರ ರೂ.ಗಳನ್ನು ಸೇರಿಸಿ ಒಟ್ಟು 10 ಸಾವಿರ ರೂ.ಗಳನ್ನು ಪ್ರತಿಯೊಬ್ಬ ರೈತರ ಖಾತೆಗಳಿಗೆ ಜಮೆ ಮಾಡಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನೇಕಾರರ ಸಾಲವನ್ನು ಮನ್ನಾ ಮಾಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುಟುಂಬದಲ್ಲಿ ಮೂವರು ಪ್ರಧಾನಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ಆದರೂ, ದೇಶದ ಬಡತನ ನಿರ್ಮೂಲನೆ ಆಗಿಲ್ಲ. ನರೇಂದ್ರ ಮೋದಿ ಅವರ ಸಮರ್ಥ ನೇತೃತ್ವದಲ್ಲಿ ದೇಶವು ಇವತ್ತು ಆರ್ಥಿಕವಾಗಿ ಸದೃಢವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾಂಗ್ರೆಸ್ ನಾಯಕರು ಹಣ, ಹೆಂಡ, ತೋಳ್ಬಲ ಹಾಗೂ ಜಾತಿ ಬಲದಿಂದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಕನಸು ಕಾಣುತ್ತಿದ್ದಾರೆ. ಆದರೆ, ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇರುವವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ನಾನು ಸವಾಲು ಹಾಕುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇದ್ದಾರೆ. ರಾಜ್ಯದ ಐದಾರು ಕಡೆ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಶಕ್ತಿ ಏನು ಅನ್ನೋದನ್ನು ತೋರಿಸುತ್ತೇವೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಬಿಜೆಪಿ ಮತ್ತೊಮ್ಮೆ ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ನಡೆದ 'ಜನಸ್ಪಂದನ' ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತ ಮೃತ್ಯು

ದೊಡ್ಡಬಳ್ಳಾಪುರ ಭಾಗದಲ್ಲಿ ಬಿಜೆಪಿ ಪ್ರಬಲವಾಗಿಲ್ಲದಿದ್ದರೂ ಇವತ್ತು ಲಕ್ಷಾಂತರ ಜನ ಇಲ್ಲಿ ಸೇರಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಅವರ ಪರಿಶ್ರಮ ಇದರಲ್ಲಿ ಹೆಚ್ಚಿದೆ. ಇನ್ನೂ ಸಾವಿರಾರು ಜನ ವೇದಿಕೆ ಬಳಿ ಬರಲು ಸಾಧ್ಯವಾಗದೆ ಬಸ್ಸುಗಳಲ್ಲಿ ಹಾಗೂ ತಮ್ಮ ವಾಹನಗಳಲ್ಲಿ ಹೊರಗೆ ಇದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News