ದೊಡ್ಡಬಳ್ಳಾಪುರದಲ್ಲಿ ನಡೆದ ‘ಜನಸ್ಪಂದನ’ ಸಮಾವೇಶದಲ್ಲಿ ರಾಹುಲ್ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ

Update: 2022-09-10 16:01 GMT

ಬೆಂಗಳೂರು, ಸೆ.10: 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ ಇಬ್ಭಾಗ ಮಾಡುವ ಘೋಷಣೆ ಕೂಗಿದ ವ್ಯಕ್ತಿಗಳನ್ನು ಜೊತೆಗೂಡಿಸಿಕೊಂಡು ‘ಭಾರತ್ ಜೋಡೋ’ ಯಾತ್ರೆ ಮಾಡುತ್ತಿದ್ದಾರೆ. ಇದು ರಾಷ್ಟ್ರದ್ರೋಹದ ಕೆಲಸ. ಭಾರತ್ ಜೋಡೋ ಎನ್ನುವ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟಗಾರರನ್ನೆ ಕಡೆಗಣಿಸಿತ್ತು' ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ  ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆಯ ‘ಜನಸ್ಪಂದನ’ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

'ಪ್ರಧಾನಿ ಮೋದಿ ರಾಜಪಥ ಹೆಸರನ್ನು ಕರ್ತವ್ಯಪಥ ಎಂದು ಬದಲಿಸಿದ್ದಾರೆ. ಆದರೆ, ಗಾಂಧಿ ಕುಟುಂಬವು ಗುಲಾಮತನದ ಸಂಕೇತವನ್ನೆ ಇಟ್ಟುಕೊಂಡಿತ್ತು. ಜನರಿಗೆ ಕೋವಿಡ್ ಲಸಿಕೆ ಪಡೆಯದಂತೆ ತಿಳಿಸುವ ಷಡ್ಯಂತ್ರವನ್ನು ಗಾಂಧಿ ಕುಟುಂಬವು ಮಾಡಿತ್ತು. ರಾಹುಲ್ ಗಾಂಧಿ ಕುಟುಂಬವು ಅಧಿಕಾರದಾಹವನ್ನು ಹೊಂದಿದೆ' ಎಂದು ಸ್ಮೃತಿ ಇರಾನಿ ಟೀಕಿಸಿದರು.

'ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ನಮ್ಮದಾಗಬೇಕು' ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದ ಅಸಮರ್ಪಕ ಆಡಳಿತವನ್ನು ಜನತೆ ಪ್ರಶ್ನಿಸಬೇಕು. ಕರ್ನಾಟಕದ ಬಗ್ಗೆ ಪಕ್ಷಪಾತದ ಧೋರಣೆಯನ್ನು ಜನರು ಪ್ರಶ್ನಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರಕಾರವು ರಸ್ತೆ ಮತ್ತು ಹೆದ್ದಾರಿ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳಲ್ಲಿ ಕರ್ನಾಟಕಕ್ಕೆ ಗರಿಷ್ಠ ಅನುದಾನವನ್ನು ನೀಡಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ರೈಲ್ವೆ ಇಲಾಖೆಯೂ ಕರ್ನಾಟಕವನ್ನು ಕಡೆಗಣಿಸಿತ್ತು. ಕರ್ನಾಟಕಕ್ಕೆ ಗರಿಷ್ಠ ಎಫ್‍ಡಿಐ ಲಭಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ. ಕರ್ನಾಟಕ ಸೆಮಿ ಕಂಡಕ್ಟರ್ ಹಬ್ ಆಗುತ್ತಿದೆ ಎಂದು ಸ್ಮೃತಿ ಇರಾನಿ ಮೆಚ್ಚುಗೆ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News