‘ಜನಸ್ಪಂದನ’ಕ್ಕೆ ಸಿಗದ ಬೆಂಬಲ: ಹುಸಿಯಾದ BJP ನಿರೀಕ್ಷೆ

Update: 2022-09-10 18:37 GMT

ಬೆಂಗಳೂರು, ಸೆ.10: ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೆ ಜನ್ಮದಿನಾಚರಣೆ ಅಂಗವಾಗಿ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ‘ಸಿದ್ದರಾಮಯ್ಯ ಅಮೃತ ಮಹೋತ್ಸವ’ ಮೀರಿಸುವಂತೆ ರಾಜ್ಯ ಸರಕಾರದ ‘ಜನಸ್ಪಂದನ’ ಕಾರ್ಯಕ್ರಮ ಮಾಡಲು ಉತ್ಸುಕರಾಗಿದ್ದ ಆಡಳಿತರೂಢ ಬಿಜೆಪಿಯ ನಿರೀಕ್ಷೆ ಹುಸಿಯಾಗಿದೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಕೆಲವು ತಾಲೂಕುಗಳನ್ನು ಒಳಗೊಂಡಂತೆ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಒಳಗೊಂಡಂತೆ ಸುಮಾರು ಮೂರು ಲಕ್ಷ ಜನರನ್ನು ಸೇರಿಸಿ ‘ಜನಸ್ಪಂದನೆ’ ಕಾರ್ಯಕ್ರಮ ಆಯೋಜಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಜನರಿಂದ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಬೆಂಬಲ ಸಿಗದಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಮನೆ ಮಾಡುವಂತಾಗಿದೆ.

ಜನಸ್ಪಂದನೆ ಕಾರ್ಯಕ್ರಮ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸುಮಾರು ಮೂರು ಲಕ್ಷ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದರು. ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದಿದ್ದರು. ಆದರೆ, ಮೂಲಗಳ ಪ್ರಕಾರ ಈ ಕಾರ್ಯಕ್ರಮದಲ್ಲಿ ಸುಮಾರು ಒಂದೂಕಾಲು ಲಕ್ಷ ಜನರಷ್ಟೇ ಸೇರಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ> ದೊಡ್ಡಬಳ್ಳಾಪುರದಲ್ಲಿ ನಡೆದ 'ಜನಸ್ಪಂದನ' ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತ ಮೃತ್ಯು

ಊಟದ ಕೌಂಟರ್ ಗಳು ಖಾಲಿ: ಜನರಿಗೆ ಸರಕಾರದ ಸ್ಪಂದನೆ ಇಲ್ಲದಿರುವಾಗ, ಸಮಾವೇಶಕ್ಕೂ ಜನರ ಸ್ಪಂದನೆ ಇಲ್ಲದಾಗಿದೆ. ಜನರಿಲ್ಲದೆ ಖಾಲಿ ಹೊಡೆಯುತ್ತಿರುವ ಊಟದ ಕೌಂಟರ್‍ಗಳು ಬಿಜೆಪಿಯ ವೈಫಲ್ಯದ ಕತೆ ಹೇಳುತ್ತಿವೆ. ಜನತೆಗೂ ತಿಳಿದಿದೆ ಬಿಜೆಪಿಯವರು ಅನ್ನಭಾಗ್ಯದವರಲ್ಲ, ಕನ್ನ ಭಾಗ್ಯದವರೆಂದು ಎಂದು ಕಾಂಗ್ರೆಸ್ ಪಕ್ಷವು ತನ್ನ ಟ್ವೀಟರ್ ಖಾತೆಯಲ್ಲಿ ಊಟದ ಕೌಂಟರ್ ಖಾಲಿ ಹೊಡೆಯುತ್ತಿರುವ ವಿಡಿಯೋ ಹಾಕಿ ಟೀಕಿಸಿದೆ.

ಸೂತಕದ ನಡುವೆ ಸಚಿವ, ಶಾಸಕರ ನೃತ್ಯ:  ಸಚಿವ ಸಂಪುಟದ ಹಾಲಿ ಸದಸ್ಯರಾಗಿದ್ದ ಉಮೇಶ್ ಕತ್ತಿ ಹೃದಯಾಘಾತಕ್ಕೆ ಒಳಗಾಗಿ ಮೂರು ದಿನಗಳಾಗಿವೆ. ಈ ನಡುವೆ ಬಿಜೆಪಿ ಸರಕಾರದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ವೇದಿಕೆ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಗಾಯಕ ವಿಜಯ್ ಪ್ರಕಾಶ್ ಹಾಡಿದ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ’ ಹಾಡಿಗೆ ವೇದಿಕೆ ಮೇಲೆ ಎಂ.ಟಿ.ಬಿ.ನಾಗರಾಜ್ ಹಾಗೂ ಎಸ್.ಆರ್.ವಿಶ್ವನಾಥ್ ಹೆಜ್ಜೆ ಹಾಕಿದರು. 

ರಾಜ್ಯದಲ್ಲಿ ಮಳೆಯ ರುದ್ರ ನರ್ತನೆ, ಸಂತ್ರಸ್ತರ ನೋವಿನ ರೋದನೆ, ಬಿಜೆಪಿಯದ್ದು ಮೋಜಿನ ನರ್ತನೆ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ. ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ ಬಿಜೆಪಿ ಸರಕಾರ. ಇದು ಲಜ್ಜೆಗೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ, ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ? ರಾಜ್ಯ ಬಿಜೆಪಿಗೆ ಕನಿಷ್ಠ ಅಂತಃಕರಣವಿಲ್ಲ. ಭ್ರಷ್ಟೋತ್ಸವದ ಮುಂದೆ ಮಾನವೀಯತೆ ಕಳೆದುಹೋಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

--------------------------------------------

ಬಿಜೆಪಿಯ ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗೈರಾಗುವ ಮೂಲಕ ಯಾವ ಸಂದೇಶ ಕೊಟ್ಟಿದ್ದಾರೆ ರಾಜ್ಯ ಬಿಜೆಪಿ? ಬೊಮ್ಮಾಯಿಯವರ ಮೇಲೆ ಪ್ರೀತಿ ಇಲ್ಲವೆಂದೇ? ಬಿಜೆಪಿ ಆಡಳಿತ ಸಮಾಧಾನ ತರಲಿಲ್ಲವೆಂದೇ? ಜನ ನೋವಲ್ಲಿರುವಾಗ ಸಂಭ್ರಮ ನಡೆಸಿದರು ಎಂಬ ಕಳಂಕ ತಪ್ಪಿಸಿಕೊಳ್ಳಲೆಂದೇ? ಬಿಜೆಪಿ ಭ್ರಷ್ಟೋತ್ಸವದ ಪ್ರಶ್ನೆಗಳನ್ನ ಎದುರಿಸಲಾಗದು ಎಂದೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News