ಬಿಜೆಪಿ ರೈತರ ಪರ ಇರುವ ಪಕ್ಷ: ನಳಿನ್ ಕುಮಾರ್ ಕಟೀಲ್

Update: 2022-09-10 16:15 GMT

ಬೆಂಗಳೂರು, ಸೆ.10: 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕಾರ್ಯಗಳು ಇದಕ್ಕೆ ಪೂರಕ ಎನಿಸಲಿವೆ ' ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆಯ ‘ಜನಸ್ಪಂದನ’ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

'ಸಿದ್ದರಾಮಯ್ಯರ ಕಾಲದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಹಗರಣ ಆಗಿದೆ. 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದ್ದು, ಗೋಹತ್ಯೆ ನಿರಂತರವಾಗಿತ್ತು. ಆದರೆ, ಗೋಹತ್ಯಾ ನಿಷೇಧ, ಮತಾಂತರ ನಿಷೇಧವನ್ನು ಬಿಜೆಪಿ ಸರಕಾರ ಜಾರಿಗೊಳಿಸಿದೆ ಎಂದು ತಿಳಿಸಿದ ಅವರು, ಬಿಜೆಪಿ ರೈತರ ಪರ ಇರುವ ಪಕ್ಷ. ಅಭಿವೃದ್ಧಿಗೆ ಹೆಸರಾಗಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಇದ್ದಾರೆ' ಎಂದು ಅವರು ಹೇಳಿದರು.

ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ಸೋನಿಯಾ ಗಾಂಧಿ, ರಾಹುಲ್, ಡಿ.ಕೆ.ಶಿವಕುಮಾರ್ ಸೇರಿ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಭ್ರಷ್ಟಾಚಾರಿಗಳ ಪಕ್ಷ ಕಾಂಗ್ರೆಸ್ ಎಂದು ಅವರು ಆರೋಪಿಸಿದರು.

ಕೋವಿಡ್ ನಿರ್ವಹಣೆಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಮರ್ಥವಾಗಿ ಮಾಡಿದೆ. 60 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿತ್ತು. ಮೋದಿ ಸರಕಾರವು ದೇಶದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News