ಬಿಜೆಪಿಯವರು ಜನರ ಮನಸ್ಸುಗಳನ್ನು ಒಡೆದಿದ್ದಾರೆ: ಎಂ.ಬಿ.ಪಾಟೀಲ್ ಕಿಡಿ

Update: 2022-09-10 17:48 GMT

ಚಿಕ್ಕಮಗಳೂರು, ಸೆ.10: 'ಬಿಜೆಪಿಯವರಿಂದಾಗಿ ದೇಶ ಹಾಗೂ ದೇಶದ ಜನರ ಮನಸ್ಸುಗಳು ಒಡೆದು ಹೋಗಿವೆ. ಒಡೆದ ಮನಸುಗಳನ್ನು ಒಂದು ಮಾಡುವ ಕೆಲಸಕ್ಕೆ ರಾಹುಲ್‍ಗಾಂಧಿ ಮುಂದಾಗಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ಅವರು ದೇಶಾದ್ಯಂತ ಸಂಚರಿಸಿ ದೇಶದ ಸಾಮರಸ್ಯ, ಏಕತೆಯ ಸಂದೇಶ ಸಾರಲಿದ್ದಾರೆ. ಇದೇ ವೇಳೆ ಬಿಜೆಪಿ ಸರಕಾರದ ಸುಳ್ಳು ಭರವಸೆಗಳು, ಕೋಮುವಾದ, ಭ್ರಷ್ಟಾಚಾರದ ಬಗ್ಗೆ ದೇಶಾದ್ಯಂತ ಅವರು ಜನಜಾಗೃತಿ ಮೂಡಿಸಲಿದ್ದಾರೆ' ಎಂದು  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾವ ಸಾಧನೆ ಮಾಡಿದ್ದಾರೆ, ಜನರ ಯಾವ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಂದು ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದಾರೆ? ಎಂದು ಕಿಡಿಕಾರಿದರು. 

'ಮಳೆಯಿಂದ ಬೆಂಗಳೂರು ನಗರ ಸ್ವಿಮ್ಮಿಂಗ್ ಫೂಲ್ ಆಗಿ ಮಾರ್ಪಟ್ಟಿದ್ದರೇ, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬೆಂಗಳೂರು ಪೂರ್ತಿ ಮುಳುಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ, ಅವರ ಪ್ರಕಾರಣ ಬೆಂಗಳೂರು ಪೂರ್ತಿ ಮುಳಗಬೇಕಿತ್ತಾ?, ಸಿಎಂ ಆದವರು ಇಂತಹ ಬೇಜವಬ್ದಾರಿ ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು'.

ರಾಜ್ಯದ ಬಿಜೆಪಿ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರ ಯಾವ ಕಷ್ಟಗಳಿಗೆ ಸ್ಪಂದಿಸಿದ್ದಾರೆಂದು ಜನಸ್ಪಂದನ ಸಮಾವೇಶ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆ ಕಟ್ಟಿಕೊಡುವ ಕೆಲಸವನ್ನೂ ಮಾಡಿಲ್ಲ. ರಾಜ್ಯದಲ್ಲಿ ಕಳೆದ 4 ವರ್ಷಗಳ ಹಿಂದೆ ಸುರಿದ ಮಳೆಯಿಂದ ಸಂತ್ರಸ್ಥರಾದವರಿಗೆ ಇನ್ನೂ ಪರಿಹಾರ ನೀಡಿಲ್ಲ. ಈ ಬಾರಿಯೂ ಭಾರೀ ಮಳೆಗೆ ನೂರಾರು ಮಂದಿ ಮನೆ, ಬೆಳೆ ಕಳೆದುಕೊಂಡು ಸಂತ್ರಸ್ಥರಾಗಿದ್ದು, ಅವರಿಗೂ ಸಮರ್ಪಕವಾಗಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಎಂ.ಬಿ.ಪಾಟೀಲ್, ಸರಕಾರದ ಕಾಮಗಾರಿಗಳಲ್ಲಿ ಶೇ.40 ಪಾರ್ಸೆಂಟ್ ಕಮೀಶನ್ ಪಡೆದು ಭ್ರಷ್ಟಾಚಾರ ನಡೆಸಿರುವುದಕ್ಕೆ ಬಿಜೆಪಿಯವರು ಜನಸ್ಫಂದನಾ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಬಿಎಂಪಿ ಕಾಮಗಾರಿಗಳಲ್ಲಿ ಇನ್ನೂ 10 ಪಾರ್ಸೆಂಟ್ ಕಮೀಶನ್ ಜಾಸ್ತಿಯಾಗಿದೆ. ಈ ಕಮೀಶನ್ ಪ್ರಮಾಣ ಚುನಾವಣೆ ಹತ್ತಿರ ಬಂದಾಗ 65-70 ಪಾರ್ಸೆಂಟ್‍ಗೂ ಹೋದರು ಆಶ್ವರ್ಯ ಪಡಬೇಕಿಲ್ಲ. ಜನ ಬಿಜೆಪಿಯ ಶಾಸಕರು, ಮಂತ್ರಿಗಳ ಕಾರ್ಯವೈಖರಿ, ಭ್ರಷ್ಟಾಚಾರ ನೋಡಿ ಶಾಪ ಹಾಕುತ್ತಿದ್ದಾರೆ ಎಂದ ಅವರು, "ರಾಜ್ಯದಲ್ಲಿ ಸರಕಾರವಿಲ್ಲ, ಸರಕಾರವನ್ನು ನಾವೇ ತಳ್ಳಿಕೊಂಡು ಹೋಗುತ್ತಿದ್ದೇವೆ" ಎಂದು ಸಚಿವ ಮಾಧುಸ್ವಾಮಿ ಸತ್ಯ ಹೇಳಿದ್ದಾರೆ. ಇದು ಬಿಜೆಪಿ ಸರಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದರು.

ಭ್ರಷ್ಟಾಚಾರ, ಬೆಲೆಏರಿಕೆಯಿಂದ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ತಿನ್ನುವ ಅನ್ನ, ಮಂಡಕ್ಕಿಗೂ ಜಿಎಸ್‍ಟಿ ಹಾಕಿದ್ದಾರೆ, ಅಡುಗೆ ಅನಿಲದ ಬೆಲೆ ಸಾವಿರ ದಾಟಿದೆ, ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಪೆಟ್ರೋಕ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಅಡುಗೆ  ಎಣ್ಣೆ ಬೆಲೆ ಗಗನಕ್ಕೇರಿದ್ದು, ಬಡವರು ಎಣ್ಣೆ ಖರೀದಿಸುವುದನ್ನೇ ಬಿಟ್ಟಿದ್ದಾರೆ. ಬಿಜೆಪಿ ಸರಕಾರ ಒಮ್ಮೆ ತೊಲಗಿದರೇ ಸಾಕು ಎನ್ನುವ ಭಾವನೆಗೆ ಜನ ಬಂದಿದ್ದಾರೆ ಎಂದ ಅವರು, ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಮುಂಬರುವ ಚುನಾಚವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 130ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಲ್.ಶಂಕರ್, ಮೋಟಮ್ಮ, ಗಾಯತ್ರಿಶಾಂತೇಗೌಡ, ರೇಖಾ ಹುಲಿಯಪ್ಪಗೌಡ, ಜಿ.ಎಚ್.ಶ್ರೀನಿವಾಸ್, ಎಂ.ಎಲ್.ಮೂರ್ತಿ, ಎಚ್.ಎಚ್.ದೇವರಾಜ್, ರವೀಶ್, ಪುಟ್ಟಸ್ವಾಮಿ, ರೂಬೆನ್, ಶಿವಾನಂದಸ್ವಾಮಿ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News