ಬೇಲೂರು | ಸರಕಾರಿ ಜಾಗಕ್ಕಾಗಿ ದಲಿತರ ಮೇಲೆ ಹಲ್ಲೆ: ಆರೋಪ

Update: 2022-09-10 18:01 GMT

ಬೇಲೂರು, ಸೆ.10: ಸರಕಾರಿ ಜಾಗಕ್ಕಾಗಿ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಮಲ್ಲಿಕಾರ್ಜುನಪುರದ ರಸ್ತೆ ಪಕ್ಕದಲ್ಲಿರುವ ಸರಕಾರಿ ಜಾಗದಲ್ಲಿ ಗ್ರಾಮದ ಸವರ್ಣೀಯರು ತಿಪ್ಪೆಹಾಕಿದ್ದರು. ಅದನ್ನು ತೆರವುಗೊಳಿಸುವಂತೆ ಗ್ರಾಮದ ದಲಿತರು ಗ್ರಾಪಂಗೆ ಮನವಿ ನೀಡಿದ್ದರು ಎನ್ನಲಾಗಿದೆ. ಈ ಮನವಿಗೆ ಸ್ಪಂದಿಸಿದ ಗ್ರಾಪಂ ಅಧಿಕಾರಿಗಳು ತಿಪ್ಪೆಯನ್ನು ತೆರವುಗೊಳಿದ್ದರು. ಈ ಕಾರಣಕ್ಕಾಗಿ ಅಂದಿನಿಂದ ದಲಿತರು ಸವರ್ಣೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ.

ತಿಪ್ಪೆ ತೆರವುಗೊಳಿಸಿದ ಜಾಗದಲ್ಲಿ ಹಾಲಿನ ಡೇರಿ ನಿರ್ಮಿಸುತ್ತೇವೆಂದು ಸವರ್ಣೀಯರು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ನೀವು ಡೇರಿ ಮಾಡಿಕೊಳ್ಳಿ ಜೊತೆಗೆ ನಮಗೆ ಗ್ರಂಥಾಲಯ ನಿರ್ಮಾಣಕ್ಕಾಗಿ ಸ್ವಲ್ಪಜಾಗ ಕೊಡಿ ಎಂದು ದಲಿತರು ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಮೇಲ್ವರ್ಗದವರು ಒಪ್ಪದ ಕಾರಣ ಜಿಲ್ಲಾ ಎಸ್ಪಿಯವರಿಗೆ ಮನವಿ ನೀಡಿದ್ದು, ಹಾಗೂ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಬೇಲೂರು ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು, ಎಸ್ಸೈ, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಯಾವ ಸಮುದಾಯಕ್ಕೂ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಸರಕಾರಿ ಜಾಗವನ್ನು ದಲಿತರಿಗೆ ಹಾಗೂ ಸವರ್ಣೀಯರಿಗೆ ಸಮನಾಗಿ ಹಂಚಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಆದರೂ ದಲಿತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದಲ್ಲದೇ ಶಾಂತಕುಮಾರ್, ಹರೀಶ್, ಸುನಿಲ್ ಸೇರಿದಂತೆ ಸವರ್ಣೀಯ ಪುಂಡರು ಸೇರಿ ದಲಿತರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಸವರ್ಣೀಯರ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದು-ಮುಂದು ನೋಡುತ್ತಿದ್ದಾರೆಂದು ದಲಿತ ಮುಖಂಡರು ಆರೋಪಿಸಿದ್ದಾರೆ. ತಮಗೆ ನ್ಯಾಯ ಒದಗಿಸುವಂತೆ ಗ್ರಾಮದ ದಲಿತರು ದಲಿತ ಸಂಘಟನೆಗಳಿಗೆ ಹಾಗೂ ಪೊಲೀಸರಿಗೆ ಮನವಿ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News