×
Ad

ಪಿಎಸ್ಸೈ ನೇಮಕಾತಿ ಹಗರಣ| ಬಿಜೆಪಿ ಶಾಸಕನಿಗೆ ಏಕೆ ಇನ್ನೂ ನೋಟಿಸ್ ನೀಡಿಲ್ಲ: ಸಿದ್ದರಾಮಯ್ಯ ಪ್ರಶ್ನೆ

Update: 2022-09-10 23:47 IST

ಹುಬ್ಬಳ್ಳಿ, ಸೆ. 10: ‘ಪಿಎಸ್ಸೈ ನೇಮಕಾತಿ ಅಕ್ರಮ ಸಂಬಂಧದ ಆರೋಪಕ್ಕೆ ಸಿಲುಕಿರುವ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಅವರಿಗೆ ಇನ್ನೂ ಏಕೆ ನೋಟಿಸ್ ನೀಡಿಲ್ಲ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶನಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಬರೀ ಸೇಡಿನ ರಾಜಕಾರಣ ಮಾಡುವುದು ಗೊತ್ತು. ನೆಲದ ಕಾನೂನನ್ನು ಹೊಸಕಿ ಹಾಕಿ ತಮಗೆ ಬೇಕಾದಂತೆ ಆಡಳಿತ ಮಾಡುತ್ತಿದ್ದಾರೆ. ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಿದ್ದರು. ಲಂಚ ಪಡೆದಿದ್ದನ್ನು ಬಿಜೆಪಿಯ ಶಾಸಕರೇ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ದೂರು ದಾಖಲು ಮಾಡಿಕೊಂಡು, ಅವರನ್ನು ಬಂಧಿಸಿ, ವಿಚಾರಣೆ ನಡೆಸಬೇಕು' ಎಂದು ಆಗ್ರಹಿಸಿದರು.

‘ಬಾದಾಮಿ ಕ್ಷೇತ್ರದಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಕಷ್ಟಗಳನ್ನು ಕೇಳಿ, ಅವುಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡಲಿದ್ದೇನೆ. ರಾಜ್ಯದ ಎಲ್ಲ ಕಡೆಗಳಲ್ಲಿ ಮಳೆ ಅಧಿಕವಾಗಿ ಬಿದ್ದು ಪ್ರವಾಹ ಪರಿಸ್ಥಿತಿ ಇದೆ, ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಈ ರೈತರಿಗೆ ಪರಿಹಾರ ಕೊಟ್ಟಿಲ್ಲ' ಎಂದು ಸಿದ್ದರಾಮಯ್ಯ ದೂರಿದರು.

ಜನರ ಆಸ್ತಿ ಪಾಸ್ತಿ, ಮನೆಗಳಿಗೆ ಹಾನಿಯಾಗಿದೆ, ರಸ್ತೆಗಳ ಮೇಲೆ ನೀರು ನಿಂತು ಬೋಟ್‍ಗಳಲ್ಲಿ ಸಂಚರಿಸಬೇಕಾದ ಸ್ಥಿತಿ ಇದೆ. ಜನರ ಈ ಎಲ್ಲ್ಲ ಸಮಸ್ಯೆಗಳಿಗೆ ಸ್ಪಂದಿಸದೆ ಬಿಜೆಪಿ ಅವರು ಜನಸ್ಪಂದನ ಕಾರ್ಯಕ್ರಮ ಅಂತ ಹೇಳಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದರೆ ಹೇಗೆ? ಇವರಿಗೆ ನಿಜವಾಗಿ ಜನರ ಬಗ್ಗೆ ಕಾಳಜಿ ಇದೆಯಾ? ಲಂಚ ಹೊಡೆದು ಸಂಪಾದಿಸಿರುವ ಹಣದಲ್ಲಿ ಜನ ಸೇರಿಸಿಕೊಂಡು ಜನಸ್ಪಂದನೆ ಎಂದು ಕಾರ್ಯಕ್ರಮ ಮಾಡಿದರೆ ಅದನ್ನು ಜನ ಒಪ್ಪಿಕೊಳ್ಳಲು ಸಿದ್ಧರಿದ್ದಾರ?' ಎಂದು ಅವರು ಟೀಕಿಸಿದರು.

‘ಸಚಿವ ಉಮೇಶ್ ಕತ್ತಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕ. ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಮರಣ ಹೊಂದಿದಾಗ ಒಂದು ಕಡೆ ಶೋಕಾಚರಣೆ ಮಾಡುತ್ತೇವೆ ಎನ್ನುತ್ತಾರೆ, ಇನ್ನೊಂದು ಕಡೆ ಬಿಜೆಪಿ ನಾಯಕರೇ ಡ್ಯಾನ್ಸ್ ಮಾಡುತ್ತಾರೆ. ಇದೇನಾ ಅವರಿಗೆ ಕೊಡುವ ಗೌರವ? ಈ ಸರಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಬರೀ ದುಡ್ಡು ಹೊಡೆಯುವ ಬಗ್ಗೆ ಮಾತ್ರ ಕಾಳಜಿ ಇದೆ' ಎಂದು ಅವರು ಟೀಕಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಯಾವ ಜಿಲ್ಲೆಗಳಿಗೂ ಹೋಗುತ್ತಿಲ್ಲ, ನಾನು ಬೆಂಗಳೂರು ನಗರದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿದೆ. ಈಗಿನ ನೆರೆ ಪರಿಸ್ಥಿತಿಗೆ ರಾಜ್ಯ ಸರಕಾರವೇ ಕಾರಣ. ನಮ್ಮ ಸರಕಾರದ ಅವಧಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುವ ಕೆರೆ ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದೆವು, ಈ ಸರಕಾರ ಈ ಕಾಮಗಾರಿಗಳನ್ನು ನಿಲ್ಲಿಸಿದೆ' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News