ಬೆಳಗಾವಿ | ಗಣೇಶ ವಿಸರ್ಜನೆ ವೇಳೆ ಚಾಕುವಿನಿಂದ ಚುಚ್ಚಿ ಯುವಕನ ಕೊಲೆ
ಬೆಳಗಾವಿ, ಸೆ.11: ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವಿನ ಗಲಾಟೆ ಯುವಕನೋರ್ವನ ಕೊಲೆಯಲ್ಲಿ (Murder) ಅಂತ್ಯಗೊಂಡ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಕೊಲೆಯಾದ ಯುವಕನನ್ನು ಅರ್ಜುನಗೌಡ ಪಾಟೀಲ್(20) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳಾದ ಉದಯ್ ಭನದ್ರೋಲಿ(21), ಸುಭಾಷ್ ಸೋಲನ್ನವರ್(21), ವಿಠ್ಠಲ ಮೀಸಿ(20) ಹಾಗೂ ಓರ್ವ ಬಾಲಾಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಬಳಿಕ ಇದು ವಿಕೋಪಕ್ಕೆ ತಿರುಗಿದ್ದು, ದುಷ್ಕರ್ಮಿಗಳು ಅರ್ಜುನಗೌಡ ಪಾಟೀಲ್(20)ರಿಗೆ ಚಾಕುವಿನಿಂದ ಕಣ್ಣಿಗೆ ಚುಚ್ಚಿದ್ದಾರೆ. ಇದರಿಂದ ಕುಸಿದುಬಿದ್ದ ಅರ್ಜುನಗೌಡರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರೆನ್ನಲಾಗಿದೆ.
ಗಲಾಟೆಗೆ ಹಳೆ ವೈಷಮ್ಯ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಕೇರಳಕ್ಕೆ ಪ್ರವೇಶ