ನಾಳೆಯಿಂದ (ಸೆ.12) ವಿಧಾನ ಮಂಡಲ ಅಧಿವೇಶನ

Update: 2022-09-11 12:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ‘ವಿಧಾನ ಮಂಡಲ ಉಭಯ ಸದನಗಳ ಮಳೆಗಾಲದ ಅಧಿವೇಶನವು ನಾಳೆ(ಸೆ.12) ಯಿಂದ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ, ವಾಗ್ವಾದಕ್ಕೆ ವೇದಿಕೆ ಸಜ್ಜುಗೊಂಡಿದೆ.

ಬೆಳಗ್ಗೆ 11ಗಂಟೆಗೆ ಸದನ ಸಮಾವೇಶಗೊಳ್ಳಲಿದ್ದು, ಸಚಿವ ಉಮೇಶ್ ಕತ್ತಿ ಸೇರಿದಂತೆ ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಿದ್ದಾರೆ. ಸೆ.13ರಿಂದ ಸೆ.23ರ ವರೆಗೆ ಒಟ್ಟು 10 ದಿನಗಳ ಕಾಲ ಕಲಾಪ ಮುಂದುವರಿಯಲಿದ್ದು, ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸನ್ನದ್ಧಗೊಂಡಿವೆ.

ಇತ್ತೀಚೆಗೆ ರಾಜ್ಯದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಅನೇಕ ಕಡೆ ರೈತರ ಬೆಳೆಗಳು, ಮನೆ, ಜನ-ಜಾನುವಾರು ಸೇರಿದಂತೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಇದನ್ನು ಸಮರ್ಪಕವಾಗಿ ಸರಕಾರ ನಿರ್ವಹಣೆ ಮಾಡಿಲ್ಲ ಎಂದು ವಿಪಕ್ಷಗಳು ಟೀಕಿಸಿದ್ದವು. ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸರಕಾರದ ಮೇಲೆ ಮುಗಿಬೀಳುವ ಸಾಧ್ಯತೆ ಇದೆ.

ಜೊತೆಗೆ ‘ಪಿಎಸ್ಸೈ, ಕೆಪಿಟಿಸಿಎಲ್, ಉಪನ್ಯಾಸಕರ ನೇಮಕಾತಿ ಅಕ್ರಮಗಳು ಸೇರಿದಂತೆ ಗುತ್ತಿಗೆದಾರರ ಸಂಘ ಆರೋಪಿಸಿರುವ ಶೇ.40ರಷ್ಟು ಕಮಿಷನ್ ದೂರುಗಳು ಈ ಬಾರಿಸದನಗಳಲ್ಲಿ ಪ್ರತಿಧ್ವನಿಸಲಿದೆ. ಅಲ್ಲದೆ, ಹಿಜಾಬ್, ಕೋಮು ಸಂಘರ್ಷಗಳನ್ನು ನಿರ್ವಹಿಸುವಲ್ಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ವಿಫಲವಾಗಿದೆ' ಎಂದು ಆರೋಪಿಸಿ ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ನಿಶ್ಚಿತವಾಗಿದೆ. ಪ್ರತಿಪಕ್ಷಗಳು ಪ್ರಸ್ತಾಪಿಸುವ ವಿಚಾರಗಳಿಗೆ ತಕ್ಕ ಉತ್ತರ ನೀಡಲು ಸರಕಾರ ಸಿದ್ಧತೆ ನಡೆಸಿದೆ.

ಸದನದಲ್ಲಿ ಸರಕಾರವನ್ನು ಅಡ್ಡಕತ್ತರಿಯಲ್ಲಿ ಸಿಲುಕಿಸುವ ಕುರಿತು ಚರ್ಚಿಸಲು ಸೆ.13ರ ಸಂಜೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ತಮ್ಮ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಉಪಸ್ಥಿತಿಯಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಜೊತೆಗೆ ಜೆಡಿಎಸ್ ಸಭೆಯನ್ನು ಕರೆದಿದೆ. 

ಇದೇ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿಯೂ ಸೆ.13ಕ್ಕೆ ಶಾಸಕಾಂಗ ಸಭೆ ನಡೆಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವರು ಹಾಗೂ ಶಾಸಕರ ಸಭೆ ನಡೆಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರದ ಪಟ್ಟಿಯನ್ನು ಜನರ ಮುಂದಿಟ್ಟಿದ್ದರು.

ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದ್ದ ಅರ್ಕಾವತಿ ಬಡಾವಣೆ ‘ರೀಡೂ ಹಗರಣ, ಇಂಧನ ಇಲಾಖೆ ಸೋಲಾರ್ ಹಗರಣ ಪ್ರಸ್ತಾಪಕ್ಕೂ ಬಿಜೆಪಿ ಮುಂದಾಗಿದೆ. ಈ ಮಧ್ಯೆ ‘ನಾವು ಯಾವುದೇ ತನಿಖೆಗೂ ಸಿದ್ಧ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದು, ಸದನದಲ್ಲಿ ಇದೇ ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆಗಳಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಾಗ್ಯದ್ಧಕ್ಕೆ ಕಾರಣವಾಗಲಿವೆ. ಹೀಗಾಗಿ ರಾಜ್ಯದ ಜನರ ಚಿತ್ತ ಅಧಿವೇಶನದತ್ತ ನೆಟ್ಟಿದೆ.

‘ಪಿಎಸ್ಸೈ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣ, ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರವೂ ಸೇರಿದಂತೆ ಎಲ್ಲ ಹಗರಣಗಳಿಗೆ ಸಂಬಂಧಿಸಿದಂತೆ ನಾನು ದಾಖಲೆ ಇಟ್ಟುಕೊಂಡು ಸದನದಲ್ಲಿ ಮಾತನಾಡಲಿದ್ದೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ತಮ್ಮ ರಾಜಕೀಯ ಅನುಭವದಲ್ಲಿ ಯಾವತ್ತೂ ‘ಹಿಟ್ ಅಂಡ್ ರನ್' ಮಾಡಿಲ್ಲ. ಬಿಜೆಪಿಯವರು ತಮ್ಮ ವಿರುದ್ಧ ಮಾಡಿರುವ ಆರೋಪದ ದಾಖಲೆಗಳನ್ನೂ ಇಟ್ಟು ಸದನದಲ್ಲಿ ಚರ್ಚೆ ಮಾಡಲಿ’
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News