×
Ad

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ

Update: 2022-09-11 20:08 IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಶನಿವಾರ ರಾತ್ರಿ ಸುರಿದ ಮಳೆ ರವಿವಾರ ಮಧ್ಯಾಹ್ನದವರೆಗೂ ಧಾರಾಕಾರ ಮಳೆ ಸುರಿದ ಪರಿಣಾಮ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಹಗಲಿನ ವೇಳೆ ಆಗಾಗ್ಗೆ ಸಾಧಾರಣವಾಗಿ ಸುರಿದ ಮಳೆ ಸಂಜೆಯಾಗುತ್ತಿದ್ದಂತೆ ಬಿರುಸು ಪಡೆದುಕೊಂಡಿತು. ಕಳಸ ಹಾಗೂ ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆ ಅತೀ ಹೆಚ್ಚು ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲೂ ಸಾಧ್ಯವಾಗಲಿಲ್ಲ. 

ಕಳಸ ತಾಲೂಕಿನಾದ್ಯಂತ ಶನಿವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೆಲವೆಡೆ ರಸ್ತೆ ಮೇಲೆ ನೀರು ಹರಿದು ರಸ್ತೆಗಳು ನದಿಗಳಂತೆ ಕಂಡು ಬಂದವು. ಮಳೆ ರಾತ್ರಿ ಮತ್ತಷ್ಟು ಬಿರುಸುಗೊಂಡಿದ್ದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು.  ಶೃಂಗೇರಿ ತಾಲೂಕಿನ ನೆಮ್ಮಾರು, ಕಿಗ್ಗಾ, ಕೆರೆಕಟ್ಟೆ, ಎಸ್‍ಕೆ ಬಾರ್ಡರ್ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಹಳ್ಳಗಳ ನೆರೆ ನೀರು ಅಕ್ಕಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ ದೃಶ್ಯಗಳೂ ಸಾಮಾನ್ಯವಾಗಿತ್ತು. ಮೂಡಿಗೆರೆ, ಕೊಪ್ಪ ತಾಲೂಕಿನಾದ್ಯಂತ ಶನಿವಾರ ಹಾಗೂ ರವಿವಾರ ಬೆಳಗ್ಗೆ ಉತ್ತಮ ಮಳೆ ಸುರಿಯಿತು.

ಭಾರೀ ಮಳೆ ಪರಿಣಾಮ ಹೇಮಾವತಿ, ಭದ್ರಾ ಹಾಗೂ ತುಂಗಾ ನದಿಗಳಲ್ಲಿ ನೀರಿನ ಹರಿವಿನಲ್ಲಿ ಮತ್ತೆ ಏರಿಕೆ ಕಂಡು ಬಂದಿದ್ದರೂ ನದಿಗಳು ಅಪಾಯದ ಮಟ್ಟದಲ್ಲಿ ಹರಿಯದ ಪರಿಣಾಮ ನದಿ ಪಾತ್ರದ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಚಿಕ್ಕಮಗಳೂರು ತಾಲೂಕಿನಲ್ಲಿ ಶನಿವಾರ ಹಾಗೂ ರವಿವಾರ ಆಗಾಗ್ಗೆ ಸಾಧಾರಣ ಮಳೆಯಾಗಿದ್ದು, ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಈ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರ ಇಡೀ ದಿನ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ನಿಲ್ಲದ ಪರಿಣಾಮ ಕಾಫಿ, ಅಡಿಕೆ ಬೆಳೆಗಾರರು ಕೊಳೆ ರೋಗಕ್ಕೆ ಬೆಳೆಗಳು ತುತ್ತಾಗುವ ಭೀತಿಯಲ್ಲಿದ್ದು, ನಿರಂತರ ಮಳೆಯಿಂದಾಗಿ ಕಾಫಿ, ಅಡಿಕೆ ಬೆಳೆಗಳು ಈಗಾಗಲೇ ಕೊಳೆ ರೋಗಕ್ಕೆ ತುತ್ತಾಗಿವೆ. ಅಲಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ, ಅಡಿಕೆ ಫಸಲುಗಳು ಕೊಳೆರೋಗದಿಂದಾಗಿ ಮಣ್ಣುಪಾಲಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News