ರಾಹುಲ್ ಗಾಂಧಿ ಪಾದಯಾತ್ರೆ ಬಿಜೆಪಿಗೆ ಸಹಿಸಲು ಆಗುತ್ತಿಲ್ಲ: ಡಿ.ಕೆ. ಶಿವಕುಮಾರ್

Update: 2022-09-11 15:22 GMT
ಡಿ.ಕೆ. ಶಿವಕುಮಾರ್ 

ಬಳ್ಳಾರಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,510 ಕಿ.ಮೀ ಪಾದಯಾತ್ರೆ ಮಾಡುತ್ತಿರುವುದನ್ನು ಕಂಡು ಬಿಜೆಪಿ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.

ರವಿವಾರ ನಗರದಲ್ಲಿ ‘ಭಾರತ್ ಜೋಡೊ’ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ದೇಶದಲ್ಲಿ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಸಮಾಜವನ್ನು ಒಡೆಯಲಾಗುತ್ತಿದೆ. ಹೀಗಾಗಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿ ದೇಶ ಹಾಗೂ ರಾಜ್ಯವನ್ನು ಒಂದುಗೂಡಿಸಲು ಈ ಪಾದಯಾತ್ರೆ ಮಾಡಲಾಗುತ್ತಿದೆ' ಎಂದರು.

‘ಬಿಜೆಪಿ ಆಡಳಿತದಲ್ಲಿ ಕರ್ನಾಟಕವು ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಈ ಸರಕಾರ ಸ್ವಾಮೀಜಿಗಳಿಂದ ಶೇ.30ರಷ್ಟು ಪರ್ಸೆಂಟ್, ಗುತ್ತಿಗೆದಾರರಿಂದ ಶೇ.40 ಕಮಿಷನ್, ಮಹಾನಗರ ಪಾಲಿಕೆಯಲ್ಲಿ ಶೇ.50ರಷ್ಟು ಲಂಚದ ಹಣ ಪಡೆಯುತ್ತಿದೆ. ಸರಕಾರಿ ಕಚೇರಿಗಳಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ ತಡೆಯಬೇಕಿದೆ. ರೈತರು ಹಾಗೂ ಕಾರ್ಮಿಕರ ಬದುಕನ್ನು ಹಸನು ಮಾಡಬೇಕಾಗಿದೆ' ಎಂದು ಹೇಳಿದರು.

ರೈತರ ಬೆಳೆಗೆ ಬೆಂಬಲ ಬೆಲೆ ಸಿಗಬೇಕಿದೆ. ಹಾಲು ಉತ್ಪಾದಿಸುವ ರೈತರಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರು ಬಳಸುವ ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ರಾಹುಲ್ ಗಾಂಧಿ ತಮಗೆ ಸಿಕ್ಕಿದ್ದ ಅಧಿಕಾರದ ಅವಕಾಶಗಳನ್ನು ತ್ಯಾಗ ಮಾಡಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ ಎಂದು ಅವರು ತಿಳಿಸಿದರು.

ರಾಹುಲ್ ಗಾಂಧಿ ರಾಜ್ಯದಲ್ಲಿ ಬೇರೆ ಮಾರ್ಗವಾಗಿ ಪಾದಯಾತ್ರೆ ಮಾಡಬಹುದಿತ್ತು. ಆದರೆ ನನ್ನ ತಾಯಿಗೆ ರಾಜಕೀಯವಾಗಿ ಜೀವ ಕೊಟ್ಟ ಬಳ್ಳಾರಿ ಕ್ಷೇತ್ರದಲ್ಲಿ ನಾನು ಪಾದಯಾತ್ರೆ ಮಾಡಬೇಕು ಎಂದು ಅವರು ತೀರ್ಮಾನಿಸಿದ್ದಾರೆ. ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಗೆದ್ದ ನಂತರ, ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಸಾಕಷ್ಟು ಯೋಜನೆಗಳನ್ನು ಈ ಜಿಲ್ಲೆಗೆ ನೀಡಲಾಗಿದೆ. ಬಳ್ಳಾರಿ ಭಾಗದ ಜನರ ಜತೆ ಮಾತನಾಡಬೇಕೆಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

‘ನಿನ್ನೆ ಸಿಎಂ ಬೊಮ್ಮಾಯಿ ಜನಸ್ಪಂದನ ಕಾರ್ಯಕ್ರಮದಲ್ಲಿ ಧಮ್ಮಿನ ವಿಚಾರ ಮಾತನಾಡಿದ್ದಾರೆ. ನಾನು ಅವರಿಗೆ ಅದೇ ಧಮ್ಮಿನಿಂದ ಹೇಳುತ್ತಿದ್ದೇನೆ, ಅವರ ಕೊನೆಯ ದಿನಗಳು ಆರಂಭವಾಗಿವೆ. ನಿಮ್ಮ ಧಮ್ಮು ಇಳಿಯುತ್ತದೆ, ನಮ್ಮ ಧಮ್ಮು ಏರುತ್ತದೆ. ಬೊಮ್ಮಾಯಿ ಅವರೇ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಎಲ್ಲ ಶಾಸಕರು ಪ್ರವಾಸ ಮಾಡುತ್ತಾರೆ. ಎಲ್ಲ ನಾಯಕರು ಜವಾಬ್ದಾರಿಯಿಂದ ಯಾತ್ರೆಯ ಸಿದ್ಧತೆಯನ್ನು ಮಾಡಬೇಕು. ನಿಮ್ಮ ಕ್ಷೇತ್ರಗಳಲ್ಲಿ ನೀವು ನಿಮ್ಮ ನಿಮ್ಮ ಫೋಟೋಗಳನ್ನು ಹಾಕಿಕೊಂಡು ಶಕ್ತಿ ಪ್ರದರ್ಶನ ತೋರಿಸಬೇಕು. ಪ್ರತಿ ಕ್ಷೇತ್ರದಲ್ಲಿ 25 ಸಾವಿರ ಜನರನ್ನು ಸೇರಿಸಿ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಶಿವಕುಮಾರ್ ತಿಳಿಸಿದರು.

ಸ್ವಾತಂತ್ರ ನಡಿಗೆ ಕಾರ್ಯಕ್ರಮಕ್ಕೆ ಜನ ಅದರಲ್ಲಿ ಯುವಕರು ಹೇಗೆ ಸೇರಿದ್ದರು ಎಂಬುದನ್ನು ನೀವು ನೋಡಿದ್ದೀರಿ. ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮಕ್ಕೆ ಜನ ಸೇರಿದ್ದನ್ನು ನೀವು ನೋಡಿದ್ದೀರಿ. ಈ ಎರಡು ಕಾರ್ಯಕ್ರಮಗಳಿಗಿಂತ ಹೆಚ್ಚಾಗಿ ರಾಹುಲ್ ಕಾರ್ಯಕ್ರಮಕ್ಕೆ ಜನರು ಬರಬೇಕು. ಈ ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News