ಫ್ಯಾಸಿಸಂ ಹಿಡಿತದಿಂದ ದೇಶ ರಕ್ಷಿಸಲು ಹೊಸ ಚಳವಳಿ ಅಗತ್ಯ: ಚಿಂತಕ ಶಿವಸುಂದರ್

Update: 2022-09-11 15:32 GMT

ಮಂಡ್ಯ: ಪ್ರಸ್ತುತ ದೇಶವನ್ನು ಫ್ಯಾಸಿಸಂ ಹಿಡಿತದಿಂದ ರಕ್ಷಿಸಲು ಹೊಸ ಚಳವಳಿಯನ್ನು ಕಟ್ಟಬೇಕಾಗಿದೆ. ರಾಜಿಯಿಲ್ಲದ ಮತ್ತು ಸಾವಿಗೆ ಹೆದರದ ಧೈರ್ಯದಿಂದ ಕಟ್ಟಿದ ಚಳವಳಿ ಮಾತ್ರ ಫ್ಯಾಸಿಸಂನ್ನು ಖಂಡಿತ ಮಣಿಸುತ್ತದೆ. ದೇಶದಲ್ಲಿ ಬದಲಾವಣೆ ತರುತ್ತದೆ ಎಂದು ಚಿಂತಕ ಶಿವಸುಂದರ್ ಪ್ರತಿಪಾದಿಸಿದ್ದಾರೆ.

ಕರ್ನಾಟಕ ಜನಶಕ್ತಿ, ಅಖಿಲ ಭಾರತ ವಕೀಲರ ಸಂಘ ಹಾಗೂ ಪ್ರಜಾಸತ್ತಾತ್ಮಕ ಸಂಘಟನೆಗಳ ವತಿಯಿಂದ ರವಿವಾರ ನಗರದ ಪತ್ರಕರ್ತ ಭವನದಲ್ಲಿ ಸಾಮಾಜಿಕ ಕಾರ್ಯಕರ್ತರಿಗಾಗಿ ‘ಬಿಕ್ಕಟ್ಟಿನಲ್ಲಿ ಭಾರತದ ಬಹುಸಾಂಸ್ಕೃತಿಕ ಸಾಮರಸ್ಯ ಪರಂಪರೆ: ಹಿಂದಿನ ಇತಿಹಾಸ ಮತ್ತು ಮುಂದಿರುವ ಸವಾಲು’ ವಿಷಯ ಕುರಿತು ಆಯೋಜಿಸಿದ್ದ ಒಂದು ದಿನದ ವೈಚಾರಿಕ ಶಿಬಿರದಲ್ಲಿ ಅವರು ವಿಚಾರ ಮಂಡಿಸಿದರು.

ಸುಮಾರು ನಾಲ್ಕುಗಂಟೆಗಳ ಸುಧೀರ್ಘವಾಗಿ ವಿಚಾರ ಮಂಡಿಸಿದ ಶಿವಸುಂದರ್, ಫ್ಯಾಸಿಸಂನ ಮೂಲ, ಅದು ಬೆಳೆದು ಬಂದ ರೀತಿ, ಸ್ವಾತಂತ್ರ್ಯಪೂರ್ವ ಮತ್ತು ನಂತರದಲ್ಲಿ ಆ ಫ್ಯಾಸಿಸಂ ದೈತ್ಯಕಾರವಾಗಿ ಬೇರೆ ಬೇರೆ ರೂಪಗಳಲ್ಲಿ ತನ್ನ ಕಬಂದಬಾಹುಗಳನ್ನು ಚಾಚಿರುವುದು. ಪ್ರಸ್ತುತ ದೇಶ ಎದುರಿಸುತ್ತಿರುವ ಆಪತ್ತು. ಪ್ರಜಾಪ್ರಭುತ್ವದ ಉಳಿವಿಗೆ ಪರ್ಯಾಯ, ಇತ್ಯಾದಿ ವಿಷಯಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯ ಉಗ್ರ ಮತ್ತು ಅತ್ಯುನ್ನತ ರೂಪವೇ ಫ್ಯಾಸಿಸಂ. ಫ್ಯಾಸಿಸಂ ವಿಚಾರ ಬಂದಾಗ ಜರ್ಮನಿಯ ಹಿಟ್ಲರ್ ನಡೆಸಿದ ನರಮೇದ ಪ್ರಸ್ತಾಪಿಸಲಾಗುತ್ತದೆ. ಆದರೆ, ಇದಕ್ಕಿಂತಲೂ ಮೊದಲು ಭಾರತದಲ್ಲಿ ಫ್ಯಾಸಿಸಂ ಹುಟ್ಟುಕೊಂಡಿತ್ತು. ನಮ್ಮ ದೇಶದ ಫ್ಯಾಸಿಸಂನ ಬೇರುಗಳು ಬ್ರಾಹ್ಮಣ್ಯದದಲ್ಲಿದೆ. ಅದು ಮನುಸ್ಮೃತಿಯಲ್ಲಿದೆ. ಈ ದೇಶದ ಶೂದ್ರರನ್ನು ಗುಲಾಮರನ್ನಾಗಿಟ್ಟುಕೊಳ್ಳುವುದು ಫ್ಯಾಸಿಸಂನ ಮೂಲ ಉದ್ದೇಶವಾಗಿದೆ ಎಂದು ಅವರು ವಿಶ್ಲೇಷಿಸಿದರು.

75 ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ನೋಡಿದರೆ ಇಂದು ತಕ್ಷಣದ, ತಾತ್ಕಾಲಿಕವಾದಂತಹ ಪರ್ಯಾಯ ಹುಡುಕಲು ಹೋದರೆ ನಾವು ಸಿನಿಕರಾಗಿಬಿಡುತ್ತೇವೆ. ಪ್ರಸ್ತುತ ದೇಶವನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡುವಂತಹ ಪ್ರಭುತ್ವವನ್ನು ತರಲು ಹಾಗೂ ಅಂಬೇಡ್ಕರ್ ಆಶಯಗಳ ಸಾಕಾರಗೊಳ್ಳಲು ಸಿದ್ದತೆ ಆಗಬೇಕಾಗಿದೆ. ಜನರಲ್ಲಿ ಬದಲಾವಣೆ ತರಬೇಕಾಗಿದೆ. ಅದು ದ್ವೇಷದಿಂದ ಆಗಬಾರದು. ನಿಧಾನವಾಗಿ ಪ್ರೀತಿಯಿಂದ ಜನರನ್ನು ಬದಲಾವಣೆಗೆ ಅಣಿಗೊಳಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ದೇಶವಿಭಜನೆಗೆ ಮುಸ್ಲಿಂ ಲೀಗ್ ಅಥವಾ ಜಿನ್ನಾ ಕಾರಣ ಅಲ್ಲ. ಹಿಂದೂ ರಾಷ್ಟ್ರೀಯವಾದಿಗಳು, ಅದರಲ್ಲೂ ಸಾವರ್ಕರ್ ಪ್ರಮುಖ ಕಾರಣ. ಏಕೆಂದರೆ, ಹಿಂದೂ ರಾಷ್ಟ್ರೀಯವಾದಿಗಳಿಗೆ ಹಿಂದೂ ಮುಸ್ಲಿಂ ಐಕ್ಯತೆಯ ದೇಶ ಬೇಕಿರಲಿಲ್ಲ. ಮುಸ್ಲಿಂರನ್ನು ಹೊರತುಪಡಿಸಿದ ದೇಶ ಅವರಿಗೆ ಬೇಕಾಗಿತ್ತು. ಆದರೆ, ಮಹಾತ್ಮ ಗಾಂಧಿ ಅವರು ದೇಶವಿಭಜನೆ ತಪ್ಪಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಕೊನೆಗೆ ದೇಶ ವಿಭಜನೆಯಿಂದ ಮತ್ತು ಬಾಂಗ್ಲಾ ವಿಭನೆಯಿಂದಲೂ ಹಿಂದೂ ರಾಷ್ಟ್ರೀಯವಾದಿಗಳು ಅತ್ಯಂತ ಸಂಭ್ರಮಪಟ್ಟರು ಎಂದು ಶಿವಸುಂದರ್ ಹೇಳಿದರು.

ಚಿಂತಕ ಪ್ರೊ.ಹುಲ್ಕೆರೆ ಮಹದೇವು, ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ.ವಿಶ್ವನಾಥ್, ಚಿಂತಕ, ನಿವೃತ್ತ ಪ್ರಾಂಶುಪಾಲ ಮಳವಳ್ಳಿಯ ಎಂ.ವಿ.ಕೃಷ್ಣ, ಕರ್ನಾಟಕ ಜನಶಕ್ತಿ ಸಂಘಟನೆಯ ಬಿ.ಕೃಷ್ಣಪ್ರಕಾಶ್ ಹಾಗೂ ಸಿದ್ದರಾಜು ಸೇರಿದಂತೆ ಹಲವು ಮಂದಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

“ನಾವಿನ್ನೂ ಕ್ಲೈಮಾಕ್ಸ್ ಮುಟ್ಟಿಲ್ಲ. ಮತ್ತೆ ಮೋದಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಕೆಲವು ಕಡೆ ಕಾಂಗ್ರೆಸ್, ಎಎಪಿ ಅಧಿಕಾರಕ್ಕೆ ಬಂದ ಮಾತ್ರಕ್ಕೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಬದಲಾವಣೆಗೆ  ತರಲು ಜನರಲ್ಲಿ ಅರಿವು ಮೂಡಿಸಬೇಕು. ಚಳವಳಿಗಳು ಜನರಲ್ಲಿ ವಿಶ್ವಾಸ ಮೂಡಿಸಬೇಕು. ಸ್ವಾರ್ಥವಿಲ್ಲದ, ದ್ವೇಷವಿಲ್ಲದ, ಸಾವನ್ನು ಮೀರಿದ ಧೈರ್ಯದ ಚಳವಳಿಯಿಂದ ಮಾತ್ರ ದೇಶ ಉಳಿಯುತ್ತದೆ.”
-ಶಿವಸುಂದರ್, ಚಿಂತಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News