ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಶಾಸಕ ಸಾ.ರಾ. ಮಹೇಶ್

Update: 2022-09-11 16:51 GMT

ಮೈಸೂರು: ಜಿಲ್ಲಾಧಿಕಾರಿಯಾಗಿದ್ದ ವೇಳೆ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆಂದು ಶಾಸಕ ಸಾ.ರಾ. ಮಹೇಶ್ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ವಿರುದ್ಧ 1 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ವಕೀಲ ಎಸ್.ಅರುಣ್‍ಕುಮಾರ್ ಮೂಲಕ ನಗರದ ಜಿಲ್ಲಾ ಸೆಷೆನ್ಸ್ ನ್ಯಾಯಾಲಯದಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ದಾವೆ ಹೂಡಿರುವುದಾಗಿ ತಿಳಿಸಿದರು.

ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಐಶಾರಾಮಿ ಜೀವನ ನಡೆಸಲು ಜಿಲ್ಲಾಧಿಕಾರಿ ನಿವಾಸದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದರು. ಕೋವಿಡ್ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಿಲ್ಲ. ಬೇಜವಾಬ್ದಾರಿ ತೋರಿದ ಕಾರಣ ಸಾವಿರಾರು ಜನರು ತಮ್ಮ ಕುಟುಂಬವನ್ನು ಕಳೆದುಕೊಂಡರು. ಇದನ್ನು ಮುಚ್ಚಿಡಲು ಕೋವಿಡ್ ಟೆಸ್ಟಿಂಗ್ ಕಡಿಮೆ ಮಾಡಿದರಲ್ಲದೇ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟರು. ಸರ್ಕಾರದ ಮುಖ್ಯಕಾರ್ಯದರ್ಶಿಗಳು ಮೈಸೂರಿಗೆ ಭೇಟಿ ನೀಡಿ ಪರಿಶೀಲಿಸದ ಬಳಿಕ ಅವರ ವರ್ಗಾವಣೆಯಾಯಿತು. ನಾವು ಅಮಾನತ್ತಿಗೆ ಒತ್ತಾಯ ಮಾಡಿದ್ದೆವು ಎಂದರು.

ನಂತರ ಹಳೇ ದಿನಾಂಕಗಳಲ್ಲಿ ನನ್ನ ವಿರುದ್ಧ ಕೆಲವು ವ್ಯಕ್ತಿಗಳಿಂದ ಅರ್ಜಿ ಪಡೆದು, 'ಸಾರಾ ಮಹೇಶ್ ರಾಜಕಾಲುವೆ, ಗೋಮಾಳ ಒತ್ತುವರಿ ಮಾಡಿಕೊಂಡಿದ್ದಾರೆ. ಅವರು ಜೈಲಿಗೆ ಹೋಗುವುದು ಗ್ಯಾರಂಟಿ' ಎಂದು ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿತ್ತು. ಇದು ನನ್ನ ರಾಜಕೀಯ ಜೀವನಕ್ಕೆ ಕುಂದುಂಟಾಗುವ ಹೇಳಿಕೆ ಆದ ಕಾರಣ ನಾನು ನನ್ನ ವಕೀಲರ ಮೂಲಕ ಅವರಿಗೆ ನೋಟೀಸ್ ನೀಡಿದ್ದೆ ಎಂದರು.

ವಕೀಲ ಅರುಣ್ ಕುಮಾರ್ ಮಾತನಾಡಿ, ಒಬ್ಬ ಐಎಎಸ್ ಅಧಿಕಾರಿ ತಮಗೆ ಬಂದ ದೂರಿನ ವಿಚಾರದ ಬಗ್ಗೆ ಗೌಪ್ಯತೆ ಕಾಪಾಡುವ ಬದಲು ಸಾರ್ವಜನಿಕವಾಗಿ ಮಾತನಾಡಿದ್ದು ಸಂವಿಧಾನ ಬಾಹಿರ. ಇದು ಶಾಸಕ ಸಾ.ರಾ.ಮಹೇಶ್ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನವಾಗಿದ್ದು, ಈ ಕಾರಣದಿಂದ ಅವರಿಗೆ ನೋಟೀಸ್ ನೀಡಲಾಗಿತ್ತು. ಸಾಮಾಜಿಕ ಜಾಲತಾಣದ ಧ್ವನಿ ತಮ್ಮದೇ ಎಂದು ಸಿಂಧೂರಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮಾಜಿ ಮಹಾಪೌರರಾದ ಲಿಂಗಪ್ಪ, ಸೋಮಣ್ಣ, ಮುಖಂಡರಾದ ಚಲುವೇಗೌಡ, ಶೈಲೇಂದ್ರ, ಕೃಷ್ಣಪ್ಪ, ರವಿಚಂದ್ರೇಗೌಡ, ಎಂ.ಪಿ.ಕುಮಾರ್, ಪ್ರಕಾಶ್ ಪ್ರಿಯದರ್ಶನ್ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News