ಬಿಜೆಪಿ ಶಾಸಕ, ಸಚಿವರು ಬ್ರೋಕರ್ ಗಳಾಗಿದ್ದಾರೆ: ಪ್ರಿಯಾಂಕ್ ಖರ್ಗೆ ಕಿಡಿ

Update: 2022-09-12 12:00 GMT
ಪ್ರಿಯಾಂಕ್ ಖರ್ಗೆ - KPCC ಸಂವಹನ ವಿಭಾಗ ಮುಖ್ಯಸ್ಥರು

ಬೆಂಗಳೂರು, ಸೆ.12: ಪರಸಪ್ಪ ಎಂಬವರ ಮಗ ಪಿಎಸ್ಸೈ ಆಗಲು ಬಯಸಿದಾಗ ಕನಕಗಿರಿ ಬಿಜೆಪಿ ಶಾಸಕರ ಆಪ್ತರು ವ್ಯವಹಾರ ಮಾಡಿ 30 ಲಕ್ಷ ರೂ.ಗಳಿಗೆ ಡೀಲ್ ನಿರ್ಧರಿಸಿದ್ದನ್ನು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ 15 ಲಕ್ಷ ರೂ.ನೀಡಿದ್ದಾರೆ. ಶಾಸಕರ ಭವನದಲ್ಲಿ ಈ ಡೀಲ್ ಮಾಡಿದ್ದಾರೆ. ಕೆಲಸ ಆಗದಿದ್ದರಿಂದ ಹಣ ಕೇಳಿದಾಗ ನಾನು ಹಣವನ್ನು ಸರಕಾರಕ್ಕೆ ಕೊಟ್ಟಿರುವುದಾಗಿ ಶಾಸಕರು ಹೇಳುತ್ತಾರೆ. ಈ ಸರಕಾರ ಎಂದರೆ ವಿಧಾನಸೌಧ ಅಲ್ಲವೇ? ಎಂದು ಪ್ರಶ್ನಿಸಿದರು.

ಶಾಸಕರು ಹಣ ವಾಪಸ್ ಮಾಡದ ಹಿನ್ನೆಲೆಯಲ್ಲಿ ಈ ಪ್ರಕರಣ ಬಹಿರಂಗವಾಗಿದೆ. ಬಿಜೆಪಿ ಶಾಸಕರು, ಸಚಿವರು ಬ್ರೋಕರ್ ಗಳಾಗಿದ್ದಾರೆ. ಬಿಜೆಪಿ ಭಾರತೀಯ ಜನತಾ ಪಕ್ಷದಿಂದ ಭ್ರಷ್ಟ ಜನತಾ ಪಕ್ಷವಾಗಿತ್ತು. ಈಗ ಶಾಸಕರಿಂದ ಬ್ರೋಕರ್ ಜನತಾ ಪಕ್ಷವಾಗಿದೆ. ಇಷ್ಟೆಲ್ಲಾ ಆದರೂ ಶಾಸಕರಿಗೆ ನೋಟಿಸ್ ಹೋಗಿಲ್ಲ. ಸುಮೋಟೋ ಪ್ರಕರಣ ದಾಖಲಾಗಿಲ್ಲ. ಮುಖ್ಯಮಂತ್ರಿ ಶಾಸಕರನ್ನು ಕರೆದು ಪ್ರಶ್ನೆ ಮಾಡಿಲ್ಲ ಯಾಕೆ? ಆಗ ಗೃಹಮಂತ್ರಿಯಾಗಿದ್ದವರು ಬೊಮ್ಮಾಯಿ ಅವರೇ ಅಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಬೊಮ್ಮಾಯಿ ದೊಡ್ಡಬಳ್ಳಾಪುರದಲ್ಲಿ ಧೈರ್ಯ, ತಾಕತ್ತು, ಧಮ್ಮಿನ ವಿಚಾರವಾಗಿ ಮಾತನಾಡಿದರು. ನಿಮಗೆ ಧಮ್ಮಿದ್ದರೆ ಶಾಸಕರನ್ನು ಕರೆಸಿ, ಪರೀಕ್ಷೆ ಬರೆದ ಯುವಕರು, ನಿರುದ್ಯೋಗಿ ಯುವಕರ ಮುಂದೆ ಈ ವಿಚಾರ ಪ್ರಸ್ತಾಪಿಸಿ. ಶಾಸಕರು ಯಾಕೆ 15 ಲಕ್ಷ ಪಡೆದರು? ಸರಕಾರಿ ಹುದ್ದೆಗಳನ್ನು ಯಾಕೆ ಮಾರಾಟ ಮಾಡಿದ್ದಾರೆ ಎಂದು ಯುವಕರ ಮುಂದೆ ಹೇಳಿ. ನಿಮ್ಮ ಯೋಗ್ಯತೆಗೆ ಒಬ್ಬರಿಗೆ ಕೆಲಸ ನೀಡಲು ಆಗಿಲ್ಲ, ನೀವು ಧಮ್ಮು ತಾಕತ್ತು ಬಗ್ಗೆ ಮಾತನಾಡುತ್ತೀರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಐಪಿಎಸ್ ಅಧಿಕಾರಿ ಜೈಲಿಗೆ ಹೋಗಿರುವುದನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿದ್ದೀರಿ. ಹಣ ಕೊಟ್ಟವರು ಹಾಗೂ ತೆಗೆದುಕೊಂಡವರು ಸತ್ಯಾಂಶ ಒಪ್ಪಿಕೊಂಡರೂ ಅವರಿಗೆ ನೋಟಿಸ್ ನೀಡಿಲ್ಲ. ನಾನು ಸಾರ್ವಜನಿಕ ವಲಯದಲ್ಲಿದ್ದ ಸಾಕ್ಷಿ ಮುಂದಿಟ್ಟರೆ ನನಗೆ ನೋಟಿಸ್ ನೀಡುತ್ತೀರಿ ಎಂದು ಅವರು ಕಿಡಿಗಾರಿದರು.

ಎಡಿಜಿಪಿ ಹಲವು ದಿನಗಳಿಂದ ನಾನು ಎಲ್ಲವನ್ನು ನ್ಯಾಯಾಧೀಶರ ಮುಂದೆ ಹೇಳಲು ಸಿದ್ಧ ಎಂದು ಹೇಳುತ್ತಿದ್ದರೂ ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ ಯಾಕೆ? ನಿಮ್ಮ ಶಾಸಕರು 10 ಅಭ್ಯರ್ಥಿಗಳನ್ನು ಬುಕ್ ಮಾಡಿದ್ದಾರಂತೆ. ಒಬ್ಬ ಅಭ್ಯರ್ಥಿ ಬಂಧನವಾದಾಗ ನಿಮ್ಮ ಸಚಿವರು ಆತನನ್ನು ಬಿಡುಗಡೆ ಮಾಡಿಸಿದ್ದು ಯಾಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಶಾಸಕರು ಈಗ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದು ಹೇಳುತ್ತಿದ್ದು, ಆರಂಭದಲ್ಲಿ ಇದು ನಂದೇ ಧ್ವನಿ ಎಂದು ಒಪ್ಪಿಕೊಂಡಿದ್ದು ಯಾಕೆ? ನಂತರ ಆಡಿಯೋದಲ್ಲಿ ನೀವು ಹಣ ಯಾರಿಗೆ ಕೊಟ್ಟಿರಿ ಎಂದು ಕೇಳಿದಾಗ ಅದನ್ನೆಲ್ಲ ಹೇಳಲು ಸಾಧ್ಯವೇ ಎಂದು ಉತ್ತರಿಸಿದ್ದರು. ಆಗಲೇ ಈ ಆಡಿಯೋ, ವಿಡಿಯೋ ನಕಲಿ ಎನ್ನಬಹುದಾಗಿತ್ತಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಸೆ.5ರಂದು ಶಾಸಕ ಬಸವರಾಜ ದಢೇಸಗೂರು ಹಾಗೂ ಕುಸ್ಗಿಯ ನಿವೃತ್ತ ಕಾನ್‍ಸ್ಟೇಬಲ್ ಪರಸಪ್ಪ ಅವರ ನಡುವಣ ಸಂಭಾಷಣೆ ವೈರಲ್ ಆಗಿದೆ. ಸೆ.6ರಂದು ಮತ್ತೊಂದು ಆಡಿಯೋ ಬಿಡುಗಡೆ ಆಗಿದ್ದು, ಪರಸಪ್ಪ ಅವರು ಪಿಎಸ್ಸೈ ನೇಮಕಾತಿಗೆ 15 ಲಕ್ಷ ರೂ.ನೀಡಿರುವುದಾಗಿ ಹೇಳಿದ್ದಾರೆ ಎಂದರು.

ಈ ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಶಾಸಕರು ಒಪ್ಪಿಕೊಂಡರು. ಈಗ ಒಂದು ವಾರ ಆದರೂ ಯಾವುದೇ ತನಿಖೆ ಇಲ್ಲ. ಪರಸಪ್ಪ ಅವರು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡರಿಗೆ ದೂರು ನೀಡಿದರು. ನಂತರ ಅವರು ಈ ವಿಚಾರವಾಗಿ ಪಕ್ಷ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರು ಎಂದು ಶಿವರಾಜ್ ತಂಗಡಗಿ ಹೇಳಿದರು.

ಇಷ್ಟಾದರೂ ಇಲ್ಲಿಯವರೆಗೂ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ, ಗೃಹ ಸಚಿವರು ಮಾತನಾಡುತ್ತಿಲ್ಲ. ಇದು ಅಕ್ರಮದಲ್ಲಿ ಸರಕಾರದ ಭಾಗಿಗೆ ಸಾಕ್ಷಿ ಆಗಿದೆ. ನಂತರ ಪರಸಪ್ಪ ಮಾಧ್ಯಮಗೋಷ್ಠಿ ಮಾಡಿ ಈ ಆಡಿಯೋದಲ್ಲಿ ಮಾತನಾಡಿರುವುದು ನಾನಲ್ಲ. ನನ್ನ ಮಗ ದೈಹಿಕ ಪರೀಕ್ಷೆ ಪಾಸಾಗಿಲ್ಲ ಎಂದು ಹೇಳಿದ್ದಾರೆ. ಈಗ ಶಾಸಕರು ವಿಧಾನಸಭೆ ಮುಂದೆ ಮಾತನಾಡಿ ವಿಡಿಯೋಗಳನ್ನು ಕಟ್ ಪೇಸ್ಟ್ ಮಾಡಿ ತೋರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಪರಸಪ್ಪ ಅವರೇ ಖುದ್ದಾಗಿ ಮಾತನಾಡಿದ್ದಾರೆ ಎಂದು ಅವರು ದೂರಿದರು.

ನನ್ನ ಕನಕಗಿರಿ ಕ್ಷೇತ್ರದಲ್ಲಿ 15 ಮಂದಿ ಯುವಕರು ನೇಮಕಾತಿಗಾಗಿ ಹಣ ನೀಡಿದ್ದಾರೆ ಎಂಬ ಚರ್ಚೆ ಆಗುತ್ತಿದೆ. ಅವರು ಬಡವರಾಗಿದ್ದು, ಮಾಧ್ಯಮಗಳ ಮುಂದೆ ಬಂದು ಹೇಳಲು ಹೆದರುತ್ತಿದ್ದಾರೆ. ಹೀಗಾಗಿ ಇದು ಪೂರ್ಣ ಪ್ರಮಾಣದ ತನಿಖೆ ಆಗಬೇಕು. ರಾಜ್ಯದಲ್ಲಿ ನೂರಾರು ಮಂದಿ ಈ ವಿಚಾರವನ್ನು ಹೇಳಲು ಆಗುತ್ತಿಲ್ಲ. ಬಿಜೆಪಿಯವರು ತಮ್ಮ 40 ಪರ್ಸೆಂಟ್ ಕಮಿಷನ್ ಮುರಿದುಕೊಂಡು ಉಳಿದ ಮೊತ್ತವನ್ನಾದರೂ ನೀಡಿ ಎಂದು ಶಿವರಾಜ್ ತಂಗಡಗಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶರತ್ ಬಚ್ಚೇಗೌಡ, ಮಾಜಿ ಮೇಯರ್ ಎಂ.ರಾಮಚಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

'ಸುಮೋಟೋ ದಾಖಲಿಸಬೇಕಿತ್ತು'

ಸಾರ್ವಜನಿಕ ಪ್ರತಿನಿಧಿ ಅಲ್ಲದಿದ್ದರೂ ಯಾವುದೇ ವ್ಯಕ್ತಿ ಕೆಲಸ ಮಾಡಿಸಿಕೊಡುವುದಾಗಿ ಹಣ ಪಡೆದರೆ ಅದು ಅಪರಾಧವಾಗುತ್ತದೆ. ಹೀಗಾಗಿ ಈ ಆಡಿಯೋ ವಿಚಾರವಾಗಿ ಸುಮೋಟೋ ಪ್ರಕರಣ ದಾಖಲಿಸಬೇಕಿತ್ತು. ಈ ಕಾನೂನು ಅಡಿಯಲ್ಲಿ 3 ವರ್ಷದಿಂದ 7 ವರ್ಷದವರೆಗೂ ಶಿಕ್ಷೆ ವಿಧಿಸಬಹುದು. ಹೀಗಾಗಿ ಇವರ ವಿರುದ್ಧ ಪ್ರಕರಣ ದಾಖಲಿಸಬೇಕು.

-ಪೊನ್ನಣ್ಣ, ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News