ಯಾವುದೇ ಕಾರಣಕ್ಕೂ ‘ಪಂಪ ಮಹಾಕವಿ ರಸ್ತೆ’ ಹೆಸರು ಬದಲಾವಣೆ ಇಲ್ಲ: ಮಹೇಶ್ ಜೋಶಿ ಸ್ಪಷ್ಟನೆ

Update: 2022-09-12 15:18 GMT

ಬೆಂಗಳೂರು, ಸೆ. 12: ‘ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಎದುರಿನ ‘ಪಂಪ ಮಹಾಕವಿ ಮಾರ್ಗ'ವನ್ನು  ಕನ್ನಡಮಯ ಮಾಡಬೇಕು ಹಾಗೂ ಆಕರ್ಷಣೀಯವನ್ನಾಗಿಸಲು, ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಬಿಬಿಎಂಪಿಗೆ ಮನವಿ ಮಾಡಲಾಗಿದೆಯೇ ಹೊರತು, ‘ಪಂಪ ಮಹಾಕವಿ' ರಸ್ತೆ ಹೆಸರು ಬದಲಾವಣೆ ಪ್ರಸ್ತಾಪ ಇಲ್ಲ' ಎಂದು ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಮಾಧ್ಯಮಗಳಿಗೆ ಸ್ಪಷ್ಟಣೆ ನೀಡಿದ ಅವರು, ‘ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಪರಿಷತ್ತು ಮುಂದಾಗಿದೆ ಎನ್ನುವ ವರದಿಗಳು ಬಿತ್ತರವಾಗುತ್ತಿದ್ದು, ದುರುದ್ದೇಶದಿಂದ ಹಾಗೂ ಉದ್ಧೇಶಪೂರ್ವಕವಾಗಿ ತಪ್ಪು ಗ್ರಹಿಕೆಯಿಂದ ಕೆಲವರು ಹೀಗೆ ಮಾಡುತ್ತಿದ್ದಾರೆ. ಆದರೆ, ಪಂಪ ಮಹಾಕವಿಯ ಬಗ್ಗೆ ಕಸಾಪ ಅಪಾರವಾದ ಗೌರವ ಹೊಂದಿದೆ' ಎಂದು ವಿವರಣೆ ನೀಡಿದ್ದಾರೆ.

‘ಕಸಾಪ ಕೇಂದ್ರ ಕಚೇರಿ ಇದೇ ರಸ್ತೆಯಲ್ಲಿ ಇರುವುದರಿಂದ, ಪರಿಷತ್ತು ಹೆಮ್ಮೆಪಡುತ್ತೇವೆ. ಕೆಲವು ದಿನಗಳ ಹಿಂದೆ, ಮಿಂಟೋ ಆಸ್ಪತ್ರೆ ವೃತ್ತದಿಂದ ಮಕ್ಕಳಕೂಟ ವೃತ್ತದವರೆಗಿನ ರಸ್ತೆಯನ್ನು ‘ಕನ್ನಡಮಯ'ಗೊಳಿಸಬೇಕು, ಸಾಹಿತ್ಯ ಪರಂಪರೆ ಬಿಂಬಿಸುವ ಭೂದೃಶ್ಯ(ಲ್ಯಾಂಡ್‍ಸ್ಕೇಪ್) ಸಿದ್ಧಪಡಿಸಬೇಕು, ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಈ ಮಾರ್ಗವನ್ನು ಅಭಿವೃದ್ಧಿಪಡಿಸಿ ‘ಕನ್ನಡಮಯ ವಾತಾವರಣ' ನಿರ್ಮಾಣ ಮಾಡಬೇಕೆಂಬ ವಿನಂತಿಯನ್ನು, ಜೂನ್ 3ರಂದು ಕಸಾಪ, ಬಿಬಿಎಂಪಿಗೆ ಪತ್ರವನ್ನು ಬರೆದಿತ್ತು' ಎಂದು ಅವರು ತಿಳಿಸಿದ್ದಾರೆ.

‘ಪರಿಷತ್ತಿನ ಅಭಿಮಾನಿಗಳು ಹಾಗೂ ಕನ್ನಡ ಪ್ರೇಮಿಗಳು, ಪಂಪ ಮಹಾಕವಿ ಹೆಸರಿನೊಂದಿಗೆ ಕಸಾಪ ಹೆಸರನ್ನು  ಸೇರಿಸಿ ‘ಪಂಪಮಹಾಕವಿ-ಕನ್ನಡಸಾಹಿತ್ಯಪರಿಷತ್ತು ರಸ್ತೆ' ಎಂದು ಅಥವಾ ಆದಿಕವಿ ಪಂಪನಿಗೆ ನಾಡಿನ ಮೊದಲ ಗುರು ‘ನಾಡೋಜ' ಎಂಬ ಹೆಗ್ಗಳಿಕೆ ಇರುವುದರಿಂದ, ‘ನಾಡೋಜ ಪಂಪಮಹಾಕವಿ-ಕನ್ನಡಸಾಹಿತ್ಯಪರಿಷತ್ತು ರಸ್ತೆ' ಎಂದು ನಾಮಕರಣಕ್ಕೆ ಸಲಹೆ ನೀಡಿದ್ದಾರೆ. ಆದರೆ ಕಸಾಪ ಇದರ ಬಗ್ಗೆ ಕೇವಲ ಸಲಹೆ-ಸೂಚನೆಗಳನ್ನು ಆಲಿಸಲಾಗಿದೆಯೇ ಹೊರತು, ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ' ಎಂದು ಮಹೇಶ ಜೋಶಿ ಹೇಳಿದ್ದಾರೆ. 
 
‘ಕೇಂದ್ರದ ವ್ಯಾಪ್ತಿಯಲ್ಲಿ ಬರುವ ದೂರದರ್ಶನವನ್ನು ಕನ್ನಡಮಯ ಮಾಡುವುದರೊಂದಿಗೆ ‘ಸಮೀಪ ದರ್ಶನ'ವನ್ನಾಗಿಸಿದ್ದು, ಜನರು ನೆನೆಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಲ್ಲಿ ಕಸಾಪ ‘ಜನಸಾಮಾನ್ಯರ ಪರಿಷತ್ತು' ಮಾಡುವುದಕ್ಕಾಗಿ ನಾಡುನುಡಿ, ಸಂಸ್ಕøತಿ ವಿಚಾರದಲ್ಲಿ ಅಪಾರವಾದ ಕಾಳಜಿಯೊಂದಿಗೆ ಕೆಲಸ ಮಾಡುವಲ್ಲಿ ಹೊಸತನ ತರುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಪೂರ್ವಗ್ರಹಪೀಡಿತರು, ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ವಿಕೃತ ಮನಸ್ಸನ್ನು ಹೊಂದಿ, ವಿವಾದ ಸೃಷ್ಟಿಸುವ ಮೂಲಕವೇ, ಪ್ರಚಾರದಲ್ಲಿ ಇರಬೇಕೆಂದು, ದುರದ್ದೇಶ ಹೊಂದಿದವರು, ಯಾವಾಗಲೂ ಸಕ್ರಿಯವಾಗಿರುವುದು ದುರಂತ' ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

‘ಯಾವುದೇ ಪರಿಣಾಮಕಾರಿ ನಿರ್ಣಯ ತೆಗೆದುಕೊಳ್ಳುಲು ಪರಿಷತ್ತಿಗೆ ಒಂದು ಕಾನೂನು ಚೌಕಟ್ಟು ಇದೆ. ‘ಕಾರ್ಯಕಾರಿ ಸಮಿತಿ' ಎನ್ನುವ ಮಹತ್ವದ ವ್ಯವಸ್ಥೆ ಇರುತ್ತದೆ. ಅದರಲ್ಲಿಯೇ ಎಲ್ಲ ನಿರ್ಣಯಗಳು ಕೈಗೊಳ್ಳಲಾಗುತ್ತದೆಯೇ ಹೊರತು, ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ. ಯಾವುದೇ ಯೋಜನೆ ಅನುಷ್ಠಾನಗೊಳಿಸುವಾಗ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸೂಕ್ತ ಚರ್ಚೆಯ ನಂತರವೇ, ನಿರ್ಣಯ ಕೈಗೊಳ್ಳಲಾಗುವುದು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕನ್ನಡಿಗರು ಕಿವಿಗೊಡಬಾರದು' ಎಂದು ಮಹೇಶ್ ಜೋಶಿ ಮನವಿ ಮಾಡಿದ್ದಾರೆ. 


''ರಸ್ತೆ ಹೆಸರು ಬದಲಾವಣೆ ಪ್ರಸ್ತಾಪವೇ ಇಲ್ಲ''

‘ಪಂಪ ಮಹಾಕವಿ ರಸ್ತೆ' ಹೆಸರನ್ನು ಬದಲಾವಣೆ ಮಾಡುವಂತಹ ಚಕಾರವನ್ನೂ ನಾನು ಎತ್ತಿಲ್ಲ. ಪಂಪನ ಬಗ್ಗೆ ತಿಳುವಳಿಕೆ, ಜ್ಞಾನವೂ ಇಲ್ಲದ ವ್ಯಕ್ತಿ ನಾನಲ್ಲ. ರಸ್ತೆ ಬದಲಾವಣೆ ಊಹಾಪೋಹ ಸತ್ಯಕ್ಕೆ ದೂರ. ವಿವಾದ ಎಬ್ಬಿಸಿರುವುದನ್ನು ಕಸಾಪ ಖಂಡಿಸುತ್ತದೆ. ನಾನು ಎಡವೂ ಅಲ್ಲವೂ, ಬಲವೂ ಅಲ್ಲ. ನಾನು ಸಂಪೂರ್ಣ ಕನ್ನಡ ಪಂಥಕ್ಕೆ ಸೇರಿದ ವ್ಯಕ್ತಿ. ಯಾವುದೇ ಪರ-ವಿರೋಧವಿಲ್ಲ. ನನ್ನ ಜಾತಿ, ಧರ್ಮ, ಚಿಂತನೆ ಎಲ್ಲವೂ ಕನ್ನಡ. ಹೀಗಾಗಿ ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆ ಪ್ರಶ್ನೆಯೇ ಇಲ್ಲ'

-ಡಾ.ಮಹೇಶ್ ಜೋಶಿ ಕಸಾಪ ಅಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News