'ಜನಸ್ಪಂದನ' ಕಾರ್ಯಕ್ರಮದ ಯಶಸ್ಸಿಗೆ ಕಾಂಗ್ರೆಸ್ ದಿಕ್ಕೆಟ್ಟಿದೆ: ಬಿಜೆಪಿ

Update: 2022-09-12 14:04 GMT

ಬೆಂಗಳೂರು, ಸೆ.12: ಜನಸ್ಪಂದನ ಕಾರ್ಯಕ್ರಮದ ಯಶಸ್ಸಿಗೆ ಕಾಂಗ್ರೆಸ್ ದಿಕ್ಕೆಟ್ಟಿದೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರಮ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ. ಜನರು ಬಿಜೆಪಿ ಪಕ್ಷದ ಜೊತೆಗೆ ಇದ್ದಾರೆ ಎನ್ನುವುದು ರಾಜ್ಯದಲ್ಲಿ ನಡೆದ ಮೋದಿ ಕಾರ್ಯಕ್ರಮ ಮತ್ತು ಜನಸ್ಪಂದನ ಸಮಾವೇಶವೇ ಸಾಕ್ಷಿಯಾಗಿದೆ ಎಂದು ಬಿಜೆಪಿ ಹೇಳಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ, ಮೊದಲು ಕಾಂಗ್ರೆಸ್ ಪಕ್ಷದೊಳಗಿರುವ ಭೀತಿಯನ್ನು ನಿವಾರಿಸಿಕೊಳ್ಳಿ. ಡಿಕೆಶಿ, ಖರ್ಗೆ, ಪರಮೇಶ್ವರ್ ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. 2013ರಲ್ಲಿ ನೀವು ಮಾಡಿದ ಪಾಪಕ್ಕೆ 2023 ರಲ್ಲಿ ನಿಮ್ಮದೇ ಪಕ್ಷದ ನಾಯಕರು ಪ್ರಾಯಶ್ಚಿತ್ತದ ಭಾಗ್ಯ ಕಲ್ಪಿಸಲಿದ್ದಾರೆ ಎಂದು ಎಚ್ಚರಿಸಿದೆ.

ಭ್ರಷ್ಟರಾಮಯ್ಯ ಅವರೇ, ಕೆರೆಗಳನ್ನು ಡಿನೋಟಿಫೈ ಮಾಡಲು ತಡೆಯಿದ್ದ ಕಾಯ್ದೆಯನ್ನೇ ಅಂದು ಬದಲಾವಣೆ ಮಾಡಿ ಅನುಮೋದನೆ ನೀಡಿದ್ದು ಏಕೆ? ಅಕ್ರಮ ಒತ್ತುವರಿಗೆ ಕಾಂಗ್ರೆಸ್ ಸರಕಾರವೇ ನೇರ ಕಾರಣ. ಅಂದು ಸಮಸ್ಯೆ ಸೃಷ್ಟಿಸಿ ಇಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಕೆರೆಗಳನ್ನು ಡಿ-ನೋಟಿಫಿಕೇಶನ್ ಮಾಡಲು ಅವಕಾಶ ಇಲ್ಲವೆಂದು ಅಧಿಕಾರಿಗಳು ತಿಳಿಸಿದರೂ ಭ್ರಷ್ಟರಾಮಯ್ಯ ಸರಕಾರ ಕಾಯ್ದೆಯನ್ನೇ ತಿದ್ದುಪಡಿ ಮಾಡಿತು. ಈ ಜನವಿರೋಧಿ ನಿರ್ಧಾರದ ಮೂಲಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರಕಾರ ಪಡೆದ ಕಪ್ಪಕಾಣಿಕೆ ಎಷ್ಟು? ಎಂದು ಬಿಜೆಪಿ ಕೇಳಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಅಕಾಲಿಕ ಮಳೆಯ ಸಂದರ್ಭದಲ್ಲಿ, ಮೊಳಕಾಲುದ್ದ ನೀರಿನಲ್ಲೂ ಬೋಟ್ ರೈಡ್ ಮೂಲಕ ನೆರೆ ಪ್ರದೇಶಕ್ಕೆ ತೆರಳಿ ಜನ ಸ್ಪಂದನೆಯ ನಾಟಕ ಮಾಡಿದ್ದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಅಷ್ಟಕ್ಕೂ ಬೆಂಗಳೂರಿನ ಮೊನ್ನೆಯ ಸಂಕಷ್ಟದ ದಿನಗಳಿಗೆ ಭ್ರಷ್ಟರಾಮಯ್ಯ ಅವರೇ ನೇರ ಕಾರಣ ಎಂದು ಬಿಜೆಪಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News