'ಕೋವಿಡ್ ಪರಿಹಾರದ ಹಣವನ್ನು ಖಾಸಗಿ ಶಾಲೆಗಳ RTE ಶುಲ್ಕ ಮರುಪಾವತಿಗೆ ದುರ್ಬಳಕೆ ಮಾಡಿರುವುದು ಯಾರ ಮೇಲಿನ ಪ್ರೀತಿಯಿಂದ?'

Update: 2022-09-12 16:40 GMT

ಬೆಂಗಳೂರು, ಸೆ.12: ಕೋವಿಡ್ ಸಂದರ್ಭದಲ್ಲಿ ಅನುದಾನರಹಿತ ಶಿಕ್ಷಕರಿಗೆ ಪರಿಹಾರ ನೀಡಲು ಒಟ್ಟು 103.47 ಕೋಟಿ ರೂ.ಮೀಸಲಿಡಲಾಗಿತ್ತು. ಆ ಹಣದಲ್ಲಿ 31.14 ಕೋಟಿ ರೂ.ಗಳನ್ನು ಖಾಸಗಿ ಶಾಲೆಗಳ ಆರ್‍ಟಿಇ ಶುಲ್ಕ ಮರುಪಾವತಿಗೆ ನೀಡಿದ್ದಿರಲ್ಲಾ, ಇದು ಯಾರ ಮೇಲಿನ ಕಾಳಜಿಯಿಂದ ಬಿ.ಸಿ.ನಾಗೇಶ್ ಅವರೇ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.     

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತದಲ್ಲಿದ್ದಾಗ ಖಾಸಗಿ ಸಿಬಿಎಸ್‍ಸಿ ಶಾಲೆಗಳ ಆರಂಭಕ್ಕೆ ಎನ್‍ಒಸಿ ನೀಡಲು ನಿಯಮ ರೂಪಿಸದೇ, ಅನಧಿಕೃತವಾಗಿ ಹಲವು ಶಾಲೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ ಎಂಬ ಸಚಿವ ಬಿ.ಸಿ.ನಾಗೇಶ್ ಅವರ ಆರೋಪಕ್ಕೆ ಸೋಮವಾರ ಟ್ವಿಟ್ ಮೂಲಕ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,  'ಖಾಸಗಿ ಶಾಲೆಗಳ ಅಕ್ರಮಗಳ ವಿರುದ್ಧ ಸಮರ ಸಾರಿದವರಂತೆ ಹೇಳಿಕೆ ನೀಡುತ್ತಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ಕೋವಿಡ್ ಪರಿಹಾರದ ಹಣವನ್ನು ಖಾಸಗಿ ಶಾಲೆಗಳ ಆರ್.ಟಿ.ಇ ಶುಲ್ಕ ಮರುಪಾವತಿಗೆ ದುರ್ಬಳಕೆ ಮಾಡಿರುವುದು ಯಾರ ಮೇಲಿನ ಪ್ರೀತಿಯಿಂದ?' ಎಂದು ಪ್ರಶ್ನೆ ಮಾಡಿದ್ದಾರೆ. 

'ಕೋವಿಡ್ ಪರಿಹಾರಕ್ಕಾಗಿಯೇ ನಿಗದಿಪಡಿಸಿದ್ದ ಹಣವನ್ನು ಪೂರ್ಣವಾಗಿ ಆ ಉದ್ದೇಶಕ್ಕಾಗಿಯೇ ಬಳಸದಿರಲು ಕಾರಣವೇನು? ಆರ್.ಟಿ.ಇ ಮರುಪಾವತಿಗಾಗಿಯೇ 2022-23ನೇ ಸಾಲಿಗೆ ನಿಗದಿಪಡಿಸಿದ್ದ ರೂ. 500 ಕೋಟಿ ಹಣವನ್ನು ನಿಮ್ಮ ಇಲಾಖೆ ಪೂರ್ಣವಾಗಿ ಬಳಸಿಕೊಂಡಿದೆಯೇ?' ಎಂದು ಪ್ರಶ್ನಿಸಿದ್ದಾರೆ. 

'ಶಾಲಾ ಮಕ್ಕಳ ಶೂ ಖರೀದಿಗೆ ಐದು ವರ್ಷಗಳ ಹಿಂದಿನ ದರದಲ್ಲಿ ಹಣ ನೀಡಿ ಶಿಕ್ಷಕರನ್ನು ದಾನಿಗಳ ಮುಂದೆ ಕೈಯೊಡ್ಡುವಂತೆ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ತಿಂಗಳಿಗೆ ರೂ.93,000 ನೀಡುತ್ತಿದ್ದೀರಲ್ಲಾ ಇದು ನ್ಯಾಯವೇ?' ಎಂದು ಪ್ರಶ್ನಿಸಿದ್ದಾರೆ. 

ಅತಿಥಿ ಉಪನ್ಯಾಸಕರು ಕನಿಷ್ಠ 6000 ರೂಪಾಯಿಯಷ್ಟು ಗೌರವಧನ ಹೆಚ್ಚಿಸಿ ಎಂದು ಕೇಳಿದರೆ ರೂ.3000 ಕೊಟ್ಟು ಬಾಯಿ ಮುಚ್ಚಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ನಿಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆಗೆ ಟೆಂಡರ್ ಕರೆಯದೆ ಮೂರು ತಿಂಗಳಿಗೆ ರೂ.2,83,200 ಖರ್ಚು ಮಾಡುವುದು ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. 

ಇದನ್ನೂ ಓದಿ: ನಿಯಮಬಾಹಿರ ಕೆಲಸಗಳಲ್ಲಿ ನಿಮ್ಮ ಪಾಲೆಷ್ಟು?: ಸಿದ್ದರಾಮಯ್ಯರಿಗೆ ಸಚಿವ ಬಿ.ಸಿ.ನಾಗೇಶ್ ಪ್ರಶ್ನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News