ಮುರುಘಾ ಶ್ರೀ ಪ್ರಕರಣ: ನೆರೆ ರಾಜ್ಯಗಳಿಗೆ ವರ್ಗಾವಣೆ ಮಾಡಿ ತನಿಖೆ ನಡೆಸಲು ಎಚ್.ಎಂ.ವೆಂಕಟೇಶ್ ಆಗ್ರಹ
ಬೆಂಗಳೂರು, ಸೆ. 12: ‘ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ನೆರೆ ರಾಜ್ಯಗಳಿಗೆ ವರ್ಗಾವಣೆ ಮಾಡಿ ತನಿಖೆ ನಡೆಸಬೇಕು' ಎಂದು ಕೋರಿ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್, ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಇತ್ತೀಚೆಗೆ ಇಮೇಲ್ ಮೂಲಕ ಮನವಿ ಸಲ್ಲಿಸಿದ್ದು, ‘ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪ್ರಭಾವಿಯಾಗಿದ್ದು, ಸಂತ್ರಸ್ತ ಬಾಲಕಿಯರಿಗೆ ನ್ಯಾಯ ದೊರಕಿಸಿಕೊಡುವ ದೃಷ್ಟಿಯಿಂದ ಸರಕಾರ ನ್ಯಾಯಾಂಗದ ಮೇಲ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು. ತನಿಖೆ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು' ಎಂದು ಆಗ್ರಹಿಸಿದ್ದಾರೆ.
‘ಬಹಳ ಮುಖ್ಯವಾಗಿ ಮೈಸೂರಿನ ಒಡನಾಡಿ ಸಂಸ್ಥೆಯು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣವನ್ನು ಬಯಲಿಗೆಳೆದಿದ್ದು, ರಾಜ್ಯದಲ್ಲಿ ಈ ಸಂಸ್ಥೆ ಮಕ್ಕಳು ಮತ್ತು ನೊಂದ ಮಹಿಳೆಯರಿಗೆ ನ್ಯಾಯವನ್ನು ಕೊಡಿಸುವ ಕೆಲಸ ಮಾಡುತ್ತಿದ್ದು, ಶಿವಮೂರ್ತಿ ಶರಣರ ಪ್ರಕರಣ ಸಂಬಂಧ ಒಡನಾಡಿ ಸಂಸ್ಥೆ ನೀಡುವ ಸಲಹೆ-ಸೂಚನೆಗಳನ್ನು ಪರಿಗಣಿಸಬೇಕು' ಎಂದು ಅವರು ತಿಳಿಸಿದ್ದಾರೆ.
ಉತ್ತರ ನೀಡಲು ಅವರ್ಯಾರು: ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಜತೆಗೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿದ್ದು ಬಂಧಿಸಲಾಗಿದೆ. ತನಿಖೆಯನ್ನು ಹೊರ ರಾಜ್ಯಗಳಿಗೆ ವರ್ಗಾವಣೆ ಮಾಡುವ ವಿಚಾರ ಸರಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ತನಿಖೆ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಚಿತ್ರದುರ್ಗ ಡಿವೈಎಸ್ಪಿ ಪ್ರತಿಕ್ರಿಯಿಸಿದ್ದು, ನಾನು ಅವರಿಗೆ ಮನವಿಯನ್ನೇ ಸಲ್ಲಿಸಿಲ್ಲ. ನಾನು ಮನವಿ ಸಲ್ಲಿಸಿದ ಸಿಎಂ, ಗೃಹ ಸಚಿವರು ಹಾಗೂ ಡಿಜಿಪಿಯವರು ಈ ಬಗ್ಗೆ ಉತ್ತರ ನೀಡಬೇಕೆಂದು ವೆಂಕಟೇಶ್ ಒತ್ತಾಯಿಸಿದ್ದಾರೆ.