×
Ad

'ಸರಕಾರ ಹಠಕ್ಕೆ ಬೀಳದೆ ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕು': ಪ್ರತಿಪಕ್ಷಗಳ ಒಕ್ಕೊರಲ ಆಗ್ರಹ

Update: 2022-09-12 21:29 IST

ಬೆಂಗಳೂರು, ಸೆ.12: ಸರಕಾರ ಹಠಕ್ಕೆ ಬೀಳದೆ ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕು. ಗಂಭೀರ ವಿಷಯಗಳನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಪ್ರಶ್ನೋತ್ತರ ಕಲಾಪವನ್ನು ಬದಿಗೊತ್ತಿಯಾದರೂ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ ಎಂದು ತಿಳಿದು ಬಂದಿದೆ.

ಸೋಮವಾರ ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ವಿಧಾನಸಭೆ ಕಲಾಪ ಸಲಹಾ ಸಮಿತಿಯಲ್ಲಿ ಸುಗಮ ಕಲಾಪ ನಡೆಸುವ ಸಂಬಂಧ ಚರ್ಚೆ ನಡೆಸಲಾಗಿದೆ.

ಕಾಂಗ್ರೆಸ್ ಪಕ್ಷವು ನೆರೆ ಹಾವಳಿ, ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿಯಿಂದ ಆಗಿರುವ ಅನಾಹುತ, ಪಿಎಸ್ಸೈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವರಾಜ ದಢೇಸಗೂರು ಆಡಿಯೋ ವೈರಲ್ ಆಗಿರುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ನಿಲುವಳಿ ಸೂಚನೆ ಮಂಡನೆ ಮಾಡಲು ಮುಂದಾಗಿರುವುದಾಗಿ ತಿಳಿಸಿದೆ ಎನ್ನಲಾಗಿದೆ.

ಜೆಡಿಎಸ್ ಪಕ್ಷವು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಆಗಿರುವ ಅಕ್ರಮ ಸೇರಿದಂತೆ ಇನ್ನಿತರ ಪ್ರಮುಖ ವಿಚಾರಗಳನ್ನು ಸದನದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದು, ತಮಗೂ ಚರ್ಚೆಯಲ್ಲಿ ಭಾಗವಹಿಸಲು ಹೆಚ್ಚಿನ ಅವಕಾಶ ನೀಡಬೇಕು. ಕೇವಲ ಕಾಂಗ್ರೆಸ್ ಪಕ್ಷಕ್ಕಷ್ಟೇ ಕಾಲಾವಕಾಶ ನೀಡಿದರೆ ಸಾಲದು ಎಂದು ಸಭೆಯಲ್ಲಿ ತಿಳಿಸಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರಕಾರವು ಈ ಅಧಿವೇಶನದಲ್ಲಿ ಸುಮಾರು 15 ವಿಧೇಯಕಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದು, ತರಾತುರಿಯಲ್ಲಿ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಮುಂದಾಗದೆ ಚರ್ಚೆಗೆ ಮುಕ್ತ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿವೆ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News