CET ರ‍್ಯಾಂಕಿಂಗ್: ಮತ್ತೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾದ ಕೆಇಎ
ಬೆಂಗಳೂರು, ಸೆ.12: ಪುನರಾವರ್ತಿತ ವಿದ್ಯಾರ್ಥಿಗಳ ಶೇ.50 ಪಿಯು ಅಂಕಗಳನ್ನು ಸಿಇಟಿ ರ‍್ಯಾಂಕಿಂಗ್ಗೆ ಪರಿಗಣಿಸಬೇಕೆಂಬ ಹೈಕೋರ್ಟ್ ತೀರ್ಪುನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಕೆಇಎ ಮುಂದಾಗಿದೆ.
ಕಳೆದ ಜುಲೈ 30ರಂದು ಹೊರಡಿಸಲಾಗಿದ್ದ 2021-2022ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ರದ್ದುಪಡಿಸಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಕೋರ್ಸ್‍ಗಳ ಪ್ರವೇಶಾತಿಗೆ ಮರು ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳ ಪಿಯುಸಿ ಪರೀಕ್ಷೆಯ ಶೇಕಡ. 50 ಅಂಕ ಹಾಗೂ ಸಿಇಟಿಯಲ್ಲಿ ಪಡೆದಿರುವ ಶೇಕಡ. 50 ಅಂಕ ಪರಿಗಣಿಸಿ ಹೊಸದಾಗಿ ರ್ಯಾಂಕ್ ಪಟ್ಟಿ ಪ್ರಕಟಿಸುವಂತೆ ಆದೇಶಿಸಿತ್ತು.
ಈಗ ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆಗೆ ನಿರ್ಧಾರ ಮಾಡಿದೆ. ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ನೀಡಿರುವ ತೀರ್ಪುನ್ನು ಕೆಇಎ ಪಾಲಿಸಲು ಮುಂದಾದರೆ ಈ ವರ್ಷ ಸಿಇಟಿ ಬರೆದಿರುವ 1.50 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಅವರ ರ‍್ಯಾಂಕ್ ಪಟ್ಟಿ ದೊಡ್ಡ ಪ್ರಮಾಣದಲ್ಲಿ ಏರುಪೇರಾಗಲಿದೆ.